Sunday, November 11, 2007

ಕನ್ನಡಿಗರೇ.....

"ಕೈಲಾಸಂ ಜೋಕ್ಸು ಸಾಂಗ್ಸು" ಎಂಬ ಕಿರುಹೊತ್ತಿಗೆಯನ್ನು ಓದುತ್ತಿದ್ದೆ। ಕೈಲಾಸಂರವರ ಚುಟುಕಗಳು, ರಂಗ ಗೀತೆಗಳು, ಇತ್ಯಾದಿ ಎಲ್ಲವನ್ನೂ ಖ್ಯಾತ ಲೇಖಕರಾದ ಬಿ ಎಸ್ ಕೇಶವ ರಾವ್ ಅತಿ ಸುಂದರವಾಗಿ ಕ್ರೂಢೀಕರಿಸಿದ್ದಾರೆ। ಬಿ ಎಸ್ ಕೇಶವ ರಾವ್ ರವರ ಮತ್ತೊಂದು ಹಾಸ್ಯ ಭರಿತ ಹೊತ್ತಿಗೆ ನಾನು ಕೊಂಡು ಓದಿದ್ದು, "ಬೀಚಿ....ಬುಲ್ಲೆಟ್ಸು, ಬೊಂಬ್ಸ್ ಭಗವದ್ಗೀತೆ।" ಈ ಪುಸ್ತಕ ಬೀಚಿಯವರೊಂದಿಗಿನ ಕೇಶವ ರಾಯರ ಒಡನಾಟ ಬಿಂಬಿಸುತ್ತದೆ। ಮಾಸ್ಟರ್ ಹಿರಣ್ಣಯ್ಯನವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಕೇಶವರಾಯರೊಂದಿಗೆ ಮೊದಲ ಬಾರಿಗೆ ಭೆಟ್ಟಿಯಾದಾಗ ಅವರ ಬಗ್ಗೆ ಹೆಚ್ಚು ತಿಳಿಯುವ ಅವಕಾಶ ದೊರೆಯಿತು। ಅವರ ಮತ್ತೊಂದು ಪುಸ್ತಕ ಮೊನ್ನೆ ಸಪ್ನ ಪುಸ್ತಕ ಮಳಿಗೆಯಲ್ಲಿ (ಕೊಳ್ಳದಿದ್ದರೂ) ಕಣ್ಣು ಹಾಯಿಸಲು ಮರೆಯಲಿಲ್ಲ. ಪುಸ್ತಕದ ಹೆಸರು "ಕ್ರೀಂ ಆಫ಼್ ಕೈಲಾಸಂ" ಬಹುತೇಕ "ಕೈಲಾಸಂ ಜೋಕ್ಸು ಸಾಂಗ್ಸು" ನ ಹೊಸ ಪ್ರಕಟನೆಯಂತೆ ತೋರುತ್ತಿತ್ತು. "ಕೈಲಾಸಂ ಜೋಕ್ಸು ಸಾಂಗ್ಸು" ಪುಸ್ತಕದಲ್ಲಿ ಹೀಗೊಂದು ಸಂಗತಿ ಬರೆಯಲಾಗಿತ್ತು. ಕೈಲಾಸಂರವರು ಕೆಲ ಕಾಲ ಓದಿನ ಸಲುವಾಗಿ ವಿಲಾಯ್ತಿಯಲ್ಲಿದ್ದರು. ವಿಲಾಯ್ತಿಂದ ಭಾರತಕ್ಕೆ ಮರಳಿ ಬಂದಾಗ ಸಹಜವಾಗಿಯೇ ಎಲ್ಲರೂ ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು. ಅದರಲ್ಲೊಬ್ಬರು, "ಕೈಲಾಸಂ, ಇಂಗ್ಲಾಂಡ್ ನಲ್ಲಿ ನಿಮಗೆ ಯಾರದರೂ ಭಾರತದವರು ಪರಿಚಯವಾದರೇ?....." ಆ ಪ್ರಶ್ನೆಗೆ ಸಕಾರತ್ಮಕ ಉತ್ತರ ದೊರೆತ ಕೂಡಲೇ, "ದಕ್ಷಿಣ ಭಾರತದವರೆಲ್ಲಾ ಒಂದೇ ಮುಖ ಲಕ್ಷಣ ಹೊಂದಿರುವುದರಿಂದ ಪ್ರತ್ಯೇಕವಾಗಿ ಕನ್ನಡಿಗರನ್ನು ನೀವು ಹೇಗೆ ಗುರುತಿಸುತ್ತಿದ್ದಿರಿ? " ಎಂಬ ಮುಂದಿನ ಪ್ರಶ್ನೆ ಎಸೆದರು. ಅದಕ್ಕೆ ಕೈಲಾಸಂ ನುಡಿದುದು "ವೆರಿ ಸಿಂಪಲ್ಲು.... ತೆಲುಗಿನಲ್ಲಿ ಮಾತಾಡಿಸಿದಾಗ ತೆಲುಗಿನಲ್ಲೇ ಉತ್ತರಿಸಿದರೆ, ಅವರು ತೆಲುಗರೆಂದು ಖಾತ್ರಿ. ಯಾವುದಾದರೂ ಭಾಷೆಯಲ್ಲಿ ಮಾತನಾಡಿಸಿದಾಗ ತಮಿಳಿನಲ್ಲಿ ಉತ್ತರಿಸಿದರೆ, ಅವರು ತಮಿಳರೆಂದು ಖಾತ್ರಿ, ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ಇಂಗ್ಲಿಷ್ ನಲ್ಲಿ ಉತ್ತರವಿತ್ತರೆ ಅವರು ಕನ್ನಡಿಗರು, ಕರ್ನಾಟಕದವರು" ನನ್ನ ಹಲವು ಗೆಳೆಯರನ್ನು ಗಮನಿಸಿದ್ದೇನೆ. ತೆಲುಗಿನವರೊಟ್ಟಿಗೆ "ಎಮ್ರಾ ಬಾಬು. ಬಾಗುನ್ನಾರ? ಏಮು ಚೆಸ್ತಾ ಉನ್ನಾರು?" ಎಂಬುದಾಗಿ ಹೇಳುತಿದ್ದವರು, ಅಲ್ಲೇ ಕಂಡ ತಮಿಳನನ್ನು "ಸೊಲ್ಲರಾ ಮಾಪ್ಳೇ..... ವೇಳೆ ಇರಕದಾ" ಎಂದೂ ಅಲ್ಲೆಲ್ಲೋ ಅವನಪಾಡಿಗೆ ಹೋಗುತ್ತಿರುವ ಉತ್ತರ ಭಾರತೀಯನನ್ನು ತಡವಿ, "ಅಬೇ ಆಜ್ ಜಾಕೆ ಆಯೇಂಗೆ... ಥೊಡ ಅರ್ಜೆಂಟ್ ಹೈ..... ಚಲೇಗಾ ಕ್ಯಾ?" ಕನ್ನಡ ಬಾರದವರಿಗೆ ಕನ್ನಡ ಹೇಳಿಕೊಟ್ಟು ಸಂಭಾಷಣೆ ನಡೆಸುವಲ್ಲಿ ನನಗೆ ಯಾವ ಪ್ರಮಾದವಾಗಲಿ, ಆಶ್ಚರ್ಯವಾಗಲಿ, ಅಸಹ್ಯಕರ ಬೆಳವಣಿಗೆಯಾಗಲಿ ಕಾಣದು. ಆದರೂ ಕನ್ನಡದ ಬಳಕೆ ವಿರಳ. ಕನ್ನಡದವರಾಗಿ ನಮ್ಮ ಭಾಷೆ ನಾವು ಬಳಸದಿದ್ದರೆ, ಬೆಳೆಸದಿದ್ದರೆ, ನಮ್ಮ ನೆರೆಹೊರೆ ರಾಜ್ಯದವರು ಕನ್ನಡವನ್ನು ಮೆಲ್ತರುತ್ತಾರಾ? ಎಷ್ಟೋ ಬಾರಿ ನಾನು ಅದೇ ತಪ್ಪನ್ನೇ ಮಾಡಿದ್ದೇನೆ. ಲಂಬೋದರ್ ಅಥವಾ ಪ್ರತಿಮಾ ಅಥವಾ ರತ್ನಾಕರ (ನನ್ನ ಪಯಣ ಕಾರ್ಯಸ್ಥರು) ಇವರುಗಳಲ್ಲಿ ಮಾತನಾಡುವಾಗ, "ಎಂಚಿನ ಮಾರ್ರ್‍ಎ... ಬಿಸಿ ಉಳ್ಳೆರಾ... ಒಂಜಿ ಟಿಕೆಟ್ ಆವುಡು. ಸ್ವಲ್ಪ ಹೆಲ್ಪ್ ಅಂಪುಲೇ...." ಎಂದೇ ಸಂಭಾಷಣೆ ನಡೆಯುತ್ತದೆ. ನನ್ನ ಮಾತೃಭಾಷೆ ಕನ್ನಡ. ಅವರುಗಳಿಗೂ ಸ್ವಚ್ಛ ಕನ್ನಡ ಆಡಲು ಬರುತ್ತದೆ. ಆದರೂ ಕನ್ನಡ ಬಳಸುವಿಕೆಯಲ್ಲಿ ಹಿಂಜರಿಕೆ. ಸುಂದರ ಸೌಮ್ಯ ಕೇಳಲು ಇಂಪಾದ ಕನ್ನಡವನ್ನು ಯಾರೂ ಬಳಸದಿದ್ದರೆ ಭಾಷೆ ಇದ್ದು ಎನು ಪ್ರಯೋಜನ. ಶೇಟು ಅಂಗಡಿಯಲ್ಲಿ ಹಿಂದಿಯಲ್ಲಿ ಮಾತಾಡುವುದು, ಶೆಟ್ಟಿ ಅಂಗಡಿಯಲ್ಲಿ ತೆಲುಗಿನಲ್ಲಿ, ಕಾಫಿ ಡೇ ನಲ್ಲಿ ಆಂಗ್ಲದಲ್ಲಿ, ಐಯಂಗಾರಿ ಬೇಕರಿಯಲ್ಲಿ ತಮಿಳಿನಲ್ಲಿ, ಅನಿವಾರ್ಯವಿದ್ದರೆ ಮಲಯಾಳಂನಲ್ಲಿ ವ್ಯವಹರಿಸುವುದು ಎಷ್ಟು ಸೂಕ್ತ? ಸುಮಾರು ಎರಡು ವರ್ಷಗಳ ಹಿಂದೆ, ಮುನ್ನಾರ್ ಗೆ ಪ್ರಯಾಣ ಹೋದ ನಾವು, ರಾತ್ರಿ ಸರವಣ ಭವನದ ಊಟ ಸವಿಯಲು ಹೋದಾಗ ಅಲ್ಲಿನ ಚಾಕರ ನಮ್ಮ ಊಟದ ಪೋಣಿಕೆಯನ್ನು ಮಲಯಾಳಂ ನಲ್ಲಿ ಬರೆದುಕೊಂಡದ್ದು ನನಗಿನ್ನೂ ನೆನಪಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ಹೋಟೆಲ್ ಗೆ ಹೊದರೂ ಸೆರ್ವೆರ್ ಮೆನು ಹಿಡಿದು "ಮೇ ಐ ಹಾವ್ ಯುವರ್ ಆರ್ಡೆರ್ ಸಾರ್" ಅಂತಲೇ ಬಂದಾಗ ಎಷ್ಟು ಬೇಸರವಾಗುತ್ತದೆ ಗೊತ್ತೆ? ಪ್ರಾಯಶಃ ನಾವೆಲ್ಲರೂ ನಮ್ಮ ಒಳಿತನ್ನು ಮರೆತು ಇತರರ ಒಳಿತನ್ನು ಬಯಸುವವರಾಗಿಬಿಟ್ಟಿದ್ದೇವೆ. ಇತರರ ಒಳಿತನ್ನು ಬಯಸುವುದು ತಪ್ಪಲ್ಲ ಅದರೆ ನಮ್ಮ ಭಾಷೆಯ ಅದ:ಪಥನವನ್ನು ಆಶ್ರಯಿಸಿ ಇತರರ ಒಳಿತನ್ನು ಕಾಣುವುದು ತರವಲ್ಲ. ಮಿತ್ರರೇ, ಅಂಗಡಿಗಳಿರುವುದೇ ವ್ಯಾಪಾರಕ್ಕೆ. ಅವರು ತಮ್ಮ ಹೊಟ್ಟೆ ಪಾಡಿಗೆ, ತಮ್ಮ ಬದುಕಿಗೋಸ್ಕರ ಯಾವ ಭಾಷೆಯನ್ನು ಕಲಿಯಲೂ ಸಿದ್ಧರಿರುತ್ತಾರೆ. ಮನೆಯಲ್ಲಂತೂ ಅವರುಗಳು ಕನ್ನಡ ಮಾತಾಡುವುದಿಲ್ಲ, ಕಡೆಯ ಪಕ್ಷ ತಮ್ಮ ವ್ಯವಹಾರಗಳಲ್ಲಾದರೂ ಕನ್ನಡ ಬಳಸಲಿ. ಹಲವಾರು ಬಾರಿ ನನ್ನ ಸ್ನೇಹಿತರುಗಳನ್ನು ಈ ವಿಶಯವಾಗಿ ತಿದ್ದಲು ಮುಂದಾಗಿದ್ದೇನೆ. ನಾನು ಹೇಳುತ್ತಿದ್ದುದು ಒಂದೇ. ಹೆಚ್ಚು ಕನ್ನಡ ಬಳಸಿ. ಹಾಗೆಯೇ ಕನ್ನಡವನ್ನು ಉಳಿಸಿ. ಮೂರು ತಿಂಗಳ ಅವಧಿಯವರೆಗೆ ಅಮೇರಿಕೆಯಲ್ಲಿದ್ದಾಗ, ಅಲ್ಲಿಯ ಕನ್ನಡಿಗರ ಸಂಪರ್ಕವಿದದ್ದು ಬಹಳ ಕಡಿಮೆ. ಕಾರಣವೆಂದರೆ, ಕನ್ನಡಿಗರಿಗೆ, ಕನ್ನಡದಲ್ಲಿ ವ್ಯವಹರಿಸುವುದು ಅವಮಾನದ ಸಂಗತಿ. ಹಾಗಿದ್ದ ಸಂದರ್ಭದಲ್ಲಿ ನನ್ನ ಕಚೇರಿಯಲ್ಲೇ ಬೆಂಗಳೂರಿನ ಕೈಲಾಶ್ ಚಂದ್ರಶೇಖರ್ ಎಂಬಾತ ಪರಿಚಯವಾದ. ಕೆಲವು ದಿನಗಳು ಅವನೊಟ್ಟಿಗೆ ಕೆಲಸ ಮಾಡುವ (ದೌ)ರ್ಭಾಗ್ಯ ನನ್ನದಾಗಿತ್ತು. ಮಾತಾಡಲು ಪ್ರಾರಂಭಿಸಿದರೆ, ಹಾಳು ಆಂಗ್ಲ ಭಾಷೆಯೊಂದೇ. ಹಾಲಿನಂತಹ ನಮ್ಮ ಕನ್ನಡ ಇಲ್ಲವೇ ಇಲ್ಲ. ಬಹಳಷ್ಟು ಸಲ ನಾನು ಕನ್ನಡದಲ್ಲಿ ಅವನನ್ನು ಸಂಬೋಧಿಸಿದರೂ ಅವನಿಂದ ಬರುತಿದ್ದ ಉತ್ತರ ಆಂಗ್ಲದಲ್ಲೇ. ಅದೆಷ್ಟೋ ಬಾರಿ ನಾನು ಅವನಿಗೆ ಕನ್ನಡದಲ್ಲಿ ಮಾತನಾಡಲು ಟೀಕೆ ಮಾಡಿದರೂ ಆತ ತಿದ್ದುಕೊಳ್ಳುತ್ತಿರಲಿಲ್ಲ. ತೀರ ಗ್ರಂಥ ಕನ್ನಡದಲ್ಲಿ ಅವನಿಂದ ನಾನು ಉತ್ತರ ಅಪೇಕ್ಷಿಸುತ್ತಿರಲಿಲ್ಲ, ನಾನು ಬಯಸುತ್ತಿದ್ದುದು ಕಡೆಯ ಪಕ್ಷ ನಮ್ಮ ಬೆಂಗ್ಳೂರು ಕನ್ನಡ. ಕನ್ನಡದಲ್ಲಿ ಮಾತನಾಡುವುದು "ವೃತ್ತಿ-ಬಾಹ್ಯರು" ಎಂಬಂತೆ ವರ್ತಿಸುತ್ತಿದ್ದ ಅವನಿಗೆ ನನ್ನ ಪ್ರಶ್ನೆ "ಗುರುವೇ, ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರೂ ಅಂತಹದೇ ಕಚೇರಿಗಳಲ್ಲಿ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರಲ್ಲಾ....... ಅವರೆಲ್ಲರೂ ವೃತ್ತಿ ಬಾಹ್ಯರೇ?" ಆ ಮೂರು ತಿಂಗಳ ವನವಾಸದಿಂದ ಮರಳಿ ಬರುವ ವೇಳೆಗೆ, ಫ಼್ರಾಂಕ್ ಫ಼ರ್ಟ್ ನಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಪರಿಚಯವಾದವರೇ ಶ್ರೀ ಸತ್ಯಮಂಗಳ ಜಯತೀರ್ಥ ಜಯಸಿಂಹ ರಾವ್. ವಿಪರ್ಯಾಸವೆಂದರೆ, ಅವರು ನನ್ನ ಪಕ್ಕದಲ್ಲೇ ಕೂತಿದ್ದರೂ ಅವರ ಪರಿಚಯವಾದದ್ದು ಫ಼್ರಾಂಕ್ ಫ಼ರ್ಟ್ ನಿಂದ ೩೦೦೦ ಸಾವಿರ ಕಿಲೋಮೀಟರ್ ದಾಟಿದ ನಂತರ. ಸಂಭಾಷಣೆ ಪ್ರಾರಂಭವಾದದ್ದು ಆಂಗ್ಲದಲ್ಲೇ, "Are you a resident of Bengaluru?" ಎಂದು. ಉತ್ತರ ಬರುತ್ತಿದ್ದಂತೆಯೇ ಕನ್ನಡದಲ್ಲಿ ತಾಸುಗಟ್ಟಲೆ ಮಾತನ್ನಾರಂಭಿಸಿದೆವು. ಬಹಳ ಆತ್ಮೀಯರೂ ಆಗಿಬಿಟ್ಟರು. ಕೆಲಸದ ಬಗ್ಗೆ ಮಾತನಾಡಿದೆವು. ಜೀವನದ ಬಗ್ಗೆ ಮಾತಾಡಿದೆವು. ಅಕ್ಟೋಬರ್ ೩೧ರಂದು ಬಸವರಾಜ್ ಎಂಬ ನನ್ನೊಟ್ಟಿಗೇ ಕೆಲಸಮಾಡುವವನು, "Sir, I heard that last year you had organised Kannada Rajyotsava in the office. Will you please let me know about....."... ತಕ್ಷಣ ನಾನು ಕೇಳಿದೆ, "ಸ್ವಾಮಿ, ಕನ್ನಡದಲ್ಲಿ ಮಾತಾಡಬಹುದಾ?" ರಾಜ್ಯೋತ್ಸವ ಮಾಡುವ ಸಂದರ್ಭದಲ್ಲಿಯೂ ಕನ್ನಡ ಮಾತಡದಿದ್ದರೆ ಹ್ಯಾಗೆ ಸ್ವಾಮಿ? ನಟರತ್ನಾಕರ್ ಡಾ ಮಾಸ್ಟರ್ ಹಿರಣ್ಣಯ್ಯ ನಡುಬೀದಿ ನಾರಾಯಣ ನಾಟಕದಲ್ಲಿನ ಒಂದು ಮಾತು, "..........ನೋಡೀಮ್ಮಾ. ಆಂಧ್ರದವರು ಇದ್ದಾರಲ್ಲ ಅವರು ಸ್ವಾಭಿಮಾನಿಗಳು. ತಮಿಳಿನವರು ಇದ್ದಾರಲ್ಲ ಅವರು ದುರಾಭಿಮಾನಿಗಳು. ಮತ್ತೆ ನಮ್ಮ ಕನ್ನಡದವರು ಇದ್ದಾರಲ್ಲ ಅವರು ..........ನಿರsssssssಭಿಮಾನಿಗಳು. ಅಂಗೈ ಮೇಲೆ ಕೊಬ್ಬರಿ ಎಣ್ಣೆ ಹಾಕಿಕೊಳ್ತಾರೆ. ಒಂದು ಹನಿ ಮುಂಗೈಗೆ ಸೋರುವಷ್ಟರಲ್ಲಿ ಎಚ್ಚೆತ್ತುಕೊಂಡು, ಆ ಸೋರುವ ಚಿಕ್ಕ ಹನಿ ಎಣ್ಣೆಯನ್ನು ತಲೆಗೆ ಹಚ್ಕೊತಾರೆ. ಆ ಸಂದರ್ಭದಲ್ಲಿ ಚೆಲ್ಲಿದ ಉಳಿದ ಎಣ್ಣೆಯ ಪರಿವೇ ಇರುವುದಿಲ್ಲ. ಆ ಒಂದು ಹನಿ ಹಚ್ಕೊತಾರಲ್ಲಾ ಅದೆ ನವೆಂಬರ್ ಒಂದು- ಕನ್ನಡ ರಾಜ್ಯೋತ್ಸವ......... ಅರ್ಥವಾಯ್ತೇ" ಹೀಗೆ ಕನ್ನಡಾಭಿಮಾನ ಒಂದು ದಿನಕ್ಕುಳಿಯದೇ, ವರ್ಷಾವಧಿಯೂ ಇದ್ದರೆ ಕನ್ನಡಾಂಬೆ ಕ್ಷೇಮ. ತರಾತುರಿಯಲ್ಲಿ ಬರೆದ ಈ ಲೇಖನದಲ್ಲಿ ವ್ಯಾಕರಣ ದೋಷಗಳಿದ್ದರೆ, ಖಂಡಿತ ಅಕ್ಷಮ್ಯ ಅಪರಾಧವಾಗುತ್ತದೆ. ಟೀಕೆಯುಕ್ತ ತಪ್ಪುಗಳನ್ನು ತಿದ್ದಿರಿ.

Thursday, October 18, 2007

ಆಸೆ- ಆಶ್ವಾಸನೆ !?!

ಆಸೆ- ಆಶ್ವಾಸನೆ !?!



ಇದು " ಪ್ರವೀಣ್ " ನಲ್ಲಿ ಮೊದಲಿನಿಂದಲೂ ಕಂಡುಬಂದಿರುವ ಒಂದು ಗುಣ. ಇವನಿಗೆ ದ್ವಿತೀಯ ವಿಘ್ನದ ಲಕ್ಷಣ. ಯಾವುದೇ ಕೆಲಸವಾಗಲಿ, ಮೊದಲನೆಯ ದಿನದಂದು ಕಂಡುಬರುವ ಉತ್ಸಾಹ , ಸ್ವಲ್ಪ ದಿನಗಳಲ್ಲೇ ಹಾಗೆ ಉದುಗಿಹೋಗಿಬಿಡುತ್ತದೆ. ಅದು ಅವನು ಪ್ರಾರಂಭಮಾಡಿದ ದಿನಚರಿ ಬರೆಯುವ ಹವ್ಯಾಸವಿರಬಹುದು, ಅಥವಾ ಕನ್ನಡ ಪುಸ್ತಕ ಓದುವ ಆಸಕ್ತಿ ಇರಬಹುದು, ಕಲಿಯುತ್ತಿದ್ದ ವಿ.ಎಲ್.ಎಸ್.ಐ ಇರಬಹುದು, ಇಲ್ಲವೇ ಕಲಿಯುತ್ತಿದ್ದ ಕೊಳಲು ಇರಬಹುದು ಎಲ್ಲದರಲ್ಲೂ ಇನ್-ಕನ್ಸಿಸ್ಟೆನ್ಸಿ ಎದ್ದು ಕಾಣುತ್ತದೆ. ಇವೆಲ್ಲದಕ್ಕೂ ಕಾರಣ ಹುಡುಕಲೆತ್ನಿಸಿದರೆ, ಸಿಗುವ ಉತ್ತರ- "ಗುರು ಸ್ವಲ್ಪ ಬಿಜ಼ಿ ಇದ್ದೆ......ಆಗಲಿಲ್ಲ.....ಅರ್ಥ ಮಾಡಿಕೊಳೋ" ಇವನು ಒಂದಷ್ಟು ದಿನಗಳವರೆಗೆ ಇಂಗ್ಲಿಷ್ ದೈನಿಕ-ಡೆಕನ್ ಹೆರಾಳ್ಡ್ ನ ಸಾಪ್ತಾಹಿಕ ಪುರವಣಿ- ಓಪನ್ ಸೆಸೇಮ್ ನಲ್ಲಿ ಮಕ್ಕಳ ಅಂಕಣದಲ್ಲಿ ಖಾಯಮ್ ಏನಾದರೂ ಬರೆಯುತ್ತಿದ್ದ ಎಂಬುದಾಗಿ ಹೇಳಿದರೆ, ನಂಬಲು ಸಾಧ್ಯವೇ? ಅಸಾಧ್ಯವಾದರೂ ನಂಬಲೇ ಬೇಕು. ಪುರಾವೆ ಕೇಳಿದರೆ........"ಊಹುಂ ನನ್ನಲ್ಲಿ ಇಲ್ಲ" ಎನ್ನುತ್ತಾನೆ. ಅವನಿಗಿನ್ನೂ ನೆನಪಿರಬಹುದು ಅವನಪ್ಪ ಮಾರ್ಕ್ಸ್ ಕಾರ್ಡ್ ನೋಡಿ ಅವನ ಅಮ್ಮನಿಗೆ ಹೇಳುತ್ತಿದ್ದರು-".....ಇಲ್ವೇ ಇವ್ನು ಸೋಶಿಯಲ್ ನಲ್ಲಿ ವೀಕ್ ಇದಾನೆ ಅಥವಾ ಗಣಿತದಲ್ಲಿ ವೀಕ್ ಇದಾನೆ ಅಂತ ಕ್ಯಾಟೆಗೊರೈಸ್ ಮಾಡಕ್ಕೆ ಕಷ್ಟ ಕಣೇ........ ಫ಼ರ್ಸ್ಟ್ ಟೆಸ್ಟ್ ನಲ್ಲಿ ಸೊಶಿಯಲ್ ಗೆ ಕಡಿಮೆ ಮಾರ್ಕ್ಸ, ಮುಂದಿನ ಟೆಸ್ಟ್ ನಲ್ಲಿ ಗಣಿತದಲ್ಲಿ ಕಡಿಮೆ..... ತದನಂತರ ಕನ್ನಡದಲ್ಲಿ......ಮತ್ತೆಯಾವಾಗಲೋ ಹಿಂದಿಯಲ್ಲಿ......" ಇವನ ಕತೆ ಇಂಜಿನೀಯರಿಂಗ್ ನಲ್ಲೂ ಅಷ್ಟೆ. ಮೊದಲನೆಯ ಇಂಟರ್ನಲ್ ನಲ್ಲಿ ಇದ್ದ ಮಾರ್ಕ್ಸ್ ಉಳಿದ ಇಂಟರ್ನಲ್ ಗಳ ಮಾರ್ಕ್ಸ್ ಜೊತೆ ಕಂಪೇರ್ ಮಾಡುವಂತಿರಲಿಲ್ಲ.

ಈ ಇನ್-ಕನ್ಸಿಸ್ಟೆನ್ಸಿಯಿಂದ ಹೊರಬರಲು ಸದಾ ಪ್ರಯತ್ನಿಸುತ್ತಿದ್ದ ಈತ ತನ್ನ ಪ್ರಿಯವಾದ ಹವ್ಯಾಸ- ಬರವಣಿಗೆ ಬಗ್ಗೆ ಹೆಚ್ಚು ಆಸಕ್ತಿವಹಿಸಿ, ಬ್ಲಾಗ್ ಬರೆಯಲಾರಂಭಿಸಿದ. ಎರಡು ಅಂಕಣಗಳನ್ನು ಬರೆದು ಪ್ರಾಯಷಃ ಇನ್ನೇನೂ ಬರೆಯುವುದೇ ಇಲ್ಲವೆನೋ ಎಂದು ಭಾವಿಸಿದ್ದವರಿಗೆ ಮತ್ತೂ ಹಲವು ಅಂಕಣಗಳ ಭರವಸೆ ನೀಡುತ್ತಿದ್ದಾನೆ.

ಅಮೆರಿಕೆಯ ಕನ್ನಡಿಗನೊಬ್ಬನ ಬಗ್ಗೆ, ಪೂಜ್ಯ ಶ್ರೀ ಎಸ್.ಎಲ್.ಭೈರಪ್ಪ ನವರ "ಆವರಣ" ಕಾದಂಬರಿಯ ವಿಶ್ಲೇಷಣೆ, ..................ಮುಂಬರುವ ದಿನಗಳಲ್ಲಿ ನೋಡಬಹುದೇನೋ ಎಂದು ನಂಬುವ..

ನಿಮ್ಮವ,

ಪ್ರಕೊಪ

ಪ್ರವೀಣ್ ಪಟವರ್ಧನ್

Monday, June 18, 2007

ಜೊಗದ ತಂಗಿ ನಯಾಗರ

ಅಮೇರಿಕೆಯಲ್ಲಿ ಸುಮಾರು ಮೂರು ತಿಂಗಳ ಕಾಲ ನನ್ನ ಇರುವಿಕೆ ಖಾತ್ರಿಯಾಗುತ್ತಿರುವಂತೆಯೇ ಡಾಲಸ್ ನಲ್ಲಿ ವಾಸಿಸುತ್ತಿದ್ದ ನನ್ನ ಗೆಳೆಯರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದೆ. "ಹೇ ರಾಘು ನಯಾಗರಕ್ಕೆ ಟ್ರಿಪ್ ಹೋಗೋ ಪ್ಲಾನ್ ನಡೆಸಿದ್ದಾರೆ....." "ನೀನೂ ಬರ್ತೀಯೇನೋ???" ಎಂಬ ಮುಂದಿನ ಪ್ರಶ್ನೆ ವೆಂಕಿ ಕೇಳುವ ಮುಂಚೆಯೇ "ಅಣ್ಣ ನನಗೊಂದು ಸೀಟ್ ಗೆ ಟಾವೆಲ್ ಹಾಕೋsss "ಎಂದು ರಾಗ ಎಳೆದಾಗಿತ್ತು.


ಜೂನ್ ೨ ರಂದು ನಾವು (ರಾಘು, ಅನು, ಸುಮನ್, ಅಮಿತ್, ಮೀರಾ, ಜೆಜಿ, ರೋಣದ್, ಸಂತು, ಹಾಗು ನಾನು), ಡಾಲಸ್ ಫ಼ೋರ್ಟ್ ವರ್ತ್ ವಿಮಾನ ನಿಲ್ದಾಣದಿಂದ ಬಫ಼ಲೊ-ನಯಾಗರಕ್ಕೆ ಹೊರಟೆವು. ಸುಮಾರು ಐದು ತಾಸಿನ ಪ್ರಯಾಣ ಮುಗಿಸಿ ನಯಾಗರ ಬಳಿಯೇ ಇದ್ದ ಹೋಟೆಲ್ ಒಂದರಲ್ಲಿ ಸ್ವಲ್ಪ ದಣಿವಾರಿಸಿಕೊಂಡು ಸರ್ದಾರ್ ಇಂಡಿಯನ್ ಹೋಟೆಲಿನಲ್ಲಿ ಒಂದು ಘಂಟೆಯ ಕಾಲ ಹರಟುತ್ತಾ ಭರ್ಜರಿಯಾಗಿ ಊಟ ಮುಗಿಸಿ ಕಾರಿನಲ್ಲಿ ನಯಾಗರ ಜಲಪಾತದೆಡೆಗೆ ತೆರಳಿದೆವು. ಜೋಗ, ಹೊಗೇನ್ಕಲ್, ಅಬ್ಬಿ, ಇರುಪು, ಹನುಮಾನಗುಂಡಿ(ಸೂತನಬ್ಬಿ), ಗಗನಚುಕ್ಕಿ, ಚುಂಚಿ ಹೀಗೆ ಹಲವಾರು ಜಲಪಾತಗಳಿಗೆ ನಾನು ಈ ಹಿಂದೆ ಹೋಗಿದ್ದೇನೆ. ಬಹಳ ಆನಂದಪಟ್ಟಿದ್ದೇನೆ. ಆ ಅಷ್ಟೂ ಜಲಪಾತಕ್ಕೆ ಹೋದ ಅನುಭವಗಳನ್ನು ಮೆಲಕುಹಾಕಿಕೊಂಡರೆ ನೆನಪಾಗುವುದು, ಕಾಡಿನಲ್ಲಿ ತಾಸುಗಟ್ಟಲೆ ಕಲ್ಲು-ಮುಳ್ಳುಗಳ ಹಾದಿಯಲ್ಲಿ ಕಷ್ಟವಾದರೂ ಇಷ್ಟಪಟ್ಟು ನಡೆದು, ಮಧ್ಯೆ-ಮಧ್ಯೆ ಜಿಗಣೆಗಳಿಂದಗಿ ರಕ್ತ ದಾನಮಾಡಿ..ಅಂತೂ ಜಲಪಾತದ ಬುಡಕ್ಕೆ ಹೋಗಿ ನಿಂತರೆ ಆಹಾ... ಎಲ್ಲವನ್ನೂ ಮರೆವ ಸ್ವರ್ಗ-ಸುಖ. ಹೀಗಿರುವ ಅನುಭವಗಳ ನಡುವೆ ನಯಾಗರ ಜಲಪಾತವೂ ಅಂತಹದ್ದೇ ಒಂದು ಪ್ರಕೃತಿಯ ಮಡಿಲಲ್ಲಿ ಇರಬಹುದೆಂದು ಊಹಿಸಿದ್ದು ಕಾರ್ ಇಳಿಯುತ್ತಿರುವಂತೆ ಸುಳ್ಳೆನಿಸತೊಡಗಿತು. ಕಣ್ಣು ಸರಿಯಾಗಿ ತೆರೆದು ನೋಡಿದರೂ ಕಾಣುತ್ತಿದ್ದುದು ಪಕ್ಕಾ ಬೆಂಗಳೂರಿನ ಟ್ರಾಫ಼ಿಕ್. ತೀರಾ ಬೆಂಗಳೂರಿನಷ್ಟು ವಾಹನ ಚಾಲನೆ ಇರದಿದ್ದರೂ ಕಾರ್ ನಿಂತ ಕಡೆಯಿಂದ ರಸ್ತೆಯ ಮತ್ತೊಂದು ಬದಿಗೆ ದಾಟಲು ಮೂರ್ನಾಲಕ್ಕು ನಿಮಿಷ ಕಾಯಬೇಕಾಯಿತು. ಹಾಗೆಯೇ ಮುಂದೆ ಹೋದಂತೆ, ಅಜಮಾಸು ಹತ್ತು ಅಂತಸ್ತಿನ ಫ಼ುಡ್ ಕೋರ್ಟ್, ಶಾಪಿಂಗ್ ಮಾಲ್, ಹೊಟೆಲ್, ಹೀಗೆ ದೊಡ್ಡ ದೊಡ್ಡ ಕಟ್ಟಡಗಳಲ್ಲದೆ ಬೇರೇನೂ ಕಾಣಸಿಗುತ್ತಿರಲಿಲ್ಲ. ಅಂತೂ ಅಲ್ಲೆಲ್ಲೋ ೨೯ ಡಾಲರ್ ಕೊಟ್ಟು ನಯಾಗರ ವೀಕ್ಷಿಸಲು ಟಿಕೆಟ್ ಕೊಂಡುಕೊಂಡೆವು. ಹಾಗೆ ಆ ದೊಡ್ಡ ಐಶಾರಾಮಿ ಕಟ್ಟಡದಿಂದ ಹೊರಬಂದು ನೋಡಲು, ’ಭರ್’ ಎಂದು ನೀರು ಹರಿಯುವುದನ್ನು ಕಂಡೆವು. ನನ್ನ ಮನಸ್ಸು, "ಇದೂ ಕೃತಕವೇ ಕಣೋ" ಎಂಬುದಾಗಿ ಕುಟುಕುತಿತ್ತು. ಹತ್ತಿರ ಓಡಿಹೋಗಿ ನೋಡಲು ಅಲ್ಲಿ ಹರಿಯುತ್ತಿದ್ದವಳೇ ನಯಾಗರ!

ನದಿ ಸಿಕ್ಕಿತೆಂದರೆ ಜಲಪಾತವೂ ಸಿಕ್ಕಂತೆ ಎಂದು ತಿಳಿಯುವಷ್ಟರಲ್ಲಿ ಕಂಡದ್ದು ಶೆರಾಟನ್ ಹೋಟೆಲ್, ಕಾಸಿನೋಗಳು, ವಿಶ್ವದ ಅತಿ ಎತ್ತರದ ಇಮಾರತ್ತುಗಳಲ್ಲಿ ಒಂದಾದ ಪ್ರಖ್ಯಾತ ತಿರುಗುವ ಹೋಟೆಲ್ ಸ್ಕೈಲಾನ್ ಟವರ್‍ಸ್..... ಹೀಗೆ ಹಲವಾರು ಕಟ್ಟಡಗಳು; ಹಾಗೊಮ್ಮೆ ಹೀಗೊಮ್ಮೆ ಹಾರುವ ಹೆಲಿಕಾಫ್ಟರ್ಗಳೂ. ಅಲ್ಲೇ ನಮ್ಮ ಕಣ್ಣಳತೆಯ ದೂರದಲ್ಲೇ ಧುಮ್ಮಿಕ್ಕಿ ಹರಿಯುತ್ತಿದ್ದಳು- ನಯಾಗರ.

ಕೆನಡಾ, ಅಮೇರಿಕ ದೇಶಗಳನ್ನು ಬೇರ್ಪಡಿಸುವ ಕಾಲುವೆಯಾಗಿ ಹರಿಯುತ್ತಾಳೆ ನಯಾಗರ. ಅಷ್ಟೆ ಅಲ್ಲದೆ, ಹರಿದು ಮತ್ತೆಲ್ಲೋ ವಿದ್ಯುತ್ ಶಕ್ತಿ ಉತ್ಪಾದಿಸುವ ಘಟಕಕ್ಕೆ ಹೊಗುವ ಮುನ್ನ ಮೂರು ಸುಂದರ ಜಲಪಾತಗಳನ್ನು ಹುಟ್ಟು ಹಾಕಿ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದ್ದಾಳೆ ಆಕರ್ಷಿಸುತ್ತಲೇ ಇರುತ್ತಾಳೆ. ಇಲ್ಲಿನ ಮೂಲ ನಿವಾಸಿಗಳಾದ ಓಂಗಿಯಾರ ಬುಡಕಟ್ಟು ಜನಾಂಗದವರೆ ಈ ನದಿಗೆ ಒಂಗಿಯುಹಾರ ಅರ್ಥಾತ್ "ಕಡಲ್ಗಾಲುವೆ" ಎಂದು ನಾಮಕರಣ ಮಾಡಿದ್ದರು. ನಯಾಗರ ಜಲಪಾತ ಮೂರು ಜಲಪಾತಗಳ ಸಮೂಹ. ಮೊದಲನೆಯದು ಅಮೇರಿಕನ್ ಫ಼ಾಲ್ಸ್ ಎರಡನೆಯದು ಬ್ರೈಡಲ್ ವೀಲ್ ಫ಼ಾಲ್ಸ್ ಹಾಗು ಕೊನೆಯದು ಕನಡಿಯನ್ ಅಥವಾ ಹಾರ್ಷ್ ಶೂ ಫ಼ಾಲ್ಸ್. ಮೊದಲೆರೆಡು ಅಮೇರಿಕನರ ಹಕ್ಕಾದರೆ ಮೂರನೆಯದು ಕೆನಡಾ ದೇಶದ ಸುಪರ್ದಿಗೆ ಸೇರಿದ್ದು.ಸ್ಥಳೀಯ ಜನರ ನಂಬಿಕೆಯೆಂದರೆ ಈ ಜಲಪಾತದ ಕಲ್ಲುಗಳ ಹಿಂದೆ ಹೇನೊ ಹಾಗು ಲೀಲಾವಾಲ್ ಎಂಬ ದೇವ-ದೇವತೆಗಳು ಇಂದಿಗೂ ವಾಸಿಸುತ್ತಿವೆ ಎಂದು.

ನಯಾಗರಾದ ಹಿನ್ನೋಟ-ಕುಡಿನೋಟಗಳನ್ನು ನೋಡಿಯೇ ದಂಗಾದ ನಾವು ನಾವೆಯಲ್ಲಿ ಕುಳಿತು ಸಿಂಹಾವಲೋಕನಕ್ಕೆ ಮುಂದಾದೆವು. ಆ ನಯನಮನೋಹರ ದೃಶ್ಯಾವಳಿ ಕಂಡು ನಾವು ಅಮೇರಿಕೆಯಲ್ಲಿದ್ದೇವೆಂದೂ ಮರೆತು ಚೀರಿ, ಕಿರುಚಿ ನಮ್ಮ ಹರ್ಷೋದ್ಗಾರ ವ್ಯಕ್ತಪಡಿಸಿದೆವು. ಹಾಗೆಲ್ಲ ಆತ್ಮಸಂತೋಷ ವ್ಯಕ್ತಪಡಿಸುವುದು ತಪ್ಪೇ?-ಇಲ್ಲವೆಂದಿತ್ತು ಆ ದಿನದ ವಿಸ್ಮಯ.
ಅಮೇರಿಕನ್ ಫ಼ಾಲ್ಸ್ ೧೭೬ ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಪ್ರತಿ ಸೆಕಂಡ್ ಗೆ ೧೫೦೦೦೦ ಗಾಲನ್ ನೀರು ಹರಿಯುತ್ತದೆ. ಬ್ರಿಂಕ್(ಜಲಪಾತದ ಒಂದು ತುದಿಯಿಂದ ಇನ್ನೊಂದು ತುದಿ) ಸುಮಾರು ೧೦೦೦ ಅಡಿ ಬ್ರೈಡಲ್ ವೀಲ್ ಜಲಪಾತವೂ ಸರಿಸುಮಾರು ಅಷ್ಟೇ ಎತ್ತರದಿಂದ ಧುಮುಕಿದರೂ ನೀರಿನ ಹರಿವಿನ ಪ್ರಮಾಣ ಕಡಿಮೆ. ಕೆನಡಾ ಫ಼ಾಲ್ಸ್ ನ ಹರಿವು ಪ್ರತಿ ಸೆಕಂಡ್ ಗೆ ೬೦೦,೦೦೦ ಗಾಲನ್. ಹಾಗು ಬ್ರಿಂಕ್ ನ ಅಳತೆ ೨೬೦೦ ಅಡಿ. ಕೆನೆಡಿಯನ್ ಫ಼ಾಲ್ಸ್ ನ ವಾಯುವಿಹಾರದ ದ್ರುಶ್ಯ " "ಕಂಡಂತೆ ಕಾಣುವುದರಿಂದಲೇ ಈ ಹೆಸರು. ಈ ನಯಾಗರ ಜಲಪಾತವನ್ನು ಇತರೆ ಎಲ್ಲಾ ಜಲಪಾತಗಳಿಗಿಂಥ ವಿಷಿಷ್ಠವಾಗಿಸುವುದೇ ಈ ಅಂಕಿ ಅಂಶಗಳು.

ಮಧ್ಯಾಹ್ನವಿಡೀ ಸುಂದರ ದೃಶ್ಯಗಳನ್ನು ಲೊಚನಗಳಲ್ಲಿ, ಸುಲೋಚನಗಳಲ್ಲಿ, ಕಮೆರಾ ಕಣ್ಣುಗಳಲ್ಲಿ ಸೆರೆಹಿಡಿದು ಸಂಜೆಗೆ ಅಲ್ಲಿಯೇ ಅಡ್ಡಾಡುತ್ತಾ ಕಾಲಕಳೆದೆವು. ರಾತ್ರಿ ಎಂಟು ಘಂಟೆಗೆ ಸುಮಾರು ಕೆನಡಾ ದೇಶದ ಕಡೆಯಿಂದ ಜಲಪಾತಕ್ಕೆ ಬೆಳಕು ಚೆಲ್ಲುವ ಸುಂದರ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಸಂಪೂರ್ಣವಾಗಿ ಈ ಜಲಪಾತಗಳು ಕಾಣದಿದ್ದರೂ ಕತ್ತಲೆಯಲ್ಲಿ ಬೆಳಕು ಚೆಲ್ಲಿದ ಆ ನೋಟ ನೋಡಲು ಈ ಎರಡು ಕಣ್ಣುಗಳು ಸಾಲದು. ಕಡೆಗಂತೂ ಊಟ ಮುಗಿಸಿ ಮನೆಗೆ ಬಂದಾಗ ೧೧ ಘಂಟೆ.
ಮಾರನೆಯ ದಿನವೂ ನಯಾಗರದ ಶೇಷ ಭಾಗಗಳನ್ನು ನೋಡಲು ಹೊರಟೆವು.
ಆ ದಿನ ಕೇವ್ ಆಫ಼್ ದ ವಿಂಡ್ಸ್ ಎಂಬ ಮತ್ತೊಂದು ರೋಮಾಂಚನಾಕಾರಿ ಪ್ರಯಾಗಕ್ಕೆ ಸಿಧ್ಧತೆ ನಡೆಸಿದೆವು. ಸುಮಾರು ೧೭೦ ಅಡಿಯಷ್ಟು ಕಲ್ಲು ಕೋರೆದು ಅಲ್ಲೊಂದು ಎಲೆವಟರ್ ಕೂರಿಸಲಾಗಿದೆ. ಆ ಎಲೆವಟರ್ ಸಹಾಯದಿಂದಲೇ ನಮ್ಮನ್ನು ಕೊರೆಯುವ ನೀರಿನೆಡೆಗೆ ಕರೆದೊಯ್ದರು ನಯಾಗರ ಸಿಬ್ಬಂದಿಯವರು. ಸೀದ ಬ್ರೈಡಲ್ ಫ಼ಾಲ್ಸ್ ನ ಗುಂಡಿಗೆ ಹೋಗಿ ಅಲ್ಲಿ ಮೈ ತೋಯಿಸಿಕೊಂಡು ಕುಣಿದು ಕುಪ್ಪಳಿಸಿ ಆನಂದಿಸಿ ಆ ಜಾಗದಿಂದ ಕೊಂಚವೂ ಕದಲುವ ಮನಸ್ಸಿಲ್ಲದೇ ಅಂತೂ ಜಠರೋಪಾಸನೆಯ ಸಲುವಾಗಿ ಅಲ್ಲಿಂದ ಹೊರಟೆವು. ಅಲ್ಲಿಗೆ ಮುಗಿಯಿತೆ ನಯಾಗರ ಕಥನ?

ಇನ್ನೂ ಇಲ್ಲಾ! ಊಟ ಮುಗಿಸಿ ನಮ್ಮ ಕಾಪ್ಟಾನ್ ರಾಘು ಹಾಗು ವೈಸ್ ಕಾಪ್ಟಾನ್ ಜೆಜಿ ಸಹಾಯದಿಂದ ಬಫ಼ಲೊ ವಿಮಾನ ನಿಲ್ದಾಣಕ್ಕೆ ಬಂದು ತಲುಪಲು ಅಲ್ಲಿ ಕಾದಿತ್ತೆ ನಮ್ಮ ವಿಮಾನ? ಊಹೂಂ!!!!! ಆ ದಿನದ ಕೊನೆಯ ವಿಮಾನವನ್ನು ನಾವು ಮಿಸ್ ಮಾಡಿಕೊಂಡಿದ್ದೆವು. We were too early for the next day's flight!! ಹೇಗೋ ನಮ್ಮ ಕಾಪ್ಟಾನ್ ಬಸು (ಇಟಗಿ)ಯವರ ಸಹಾಯದಿಂದ ಮಾರನೆಯ ದಿನದ ವಿಮಾನಕ್ಕೆ ನಮ್ಮ ಪ್ರಯಾಣದ ಟಿಕೆಟ್ ಕಾಯ್ದಿರಿಸಿ ಮತ್ತೊಂದು ದಿನ ಅಲ್ಲೆ ಉಳಿದು ಡಾಲಸ್ ಗೆ ವಾಪಾಸ್ ಆದೆವು.

Monday, May 28, 2007

ಏಪ್ರಿಲ್ ೫ ೨೦೦೭ ಅಪರಾಹ್ನ ಸುಮಾರು ೩ ಗಂಟೆಗೆ ದೂರವಾಣಿ ಕರೆ ಮಾಡಿದ ನನ್ನಮ್ಮ "ಪೂಚಂತೆ ಇನ್ನಿಲ್ಲ ಕಣೋ...... ತೀರಿ ಹೋಗಿಬಿಟ್ರು" ಎಂದು ಹೇಳಿ ಅವಳ ಅಳಲು ತೋಡಿಕೊಂಡಳು. ಪೂಚಂತೆ ಎಂದರೆ ಪೂರ್ಣಚಂದ್ರ ತೇಜಸ್ವಿ ಎಂಬುದು ನನ್ನ ಮನದಾಳದಲ್ಲಿ ಕೂತಿದ್ದ ವಿಷಯವಾದರೂ..... ತೇಜಸ್ವಿಯವರು ತೀರಿಕೊಂಡರು ಎಂಬುದನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ತೇಜಸ್ವಿಯವರ ಅಭಿಮಾನಿಗಳೆಲ್ಲರಿಗೂ ನುಂಗಲಾರದ ಕಹಿ ತುತ್ತು ಉಣಿಸಿತ್ತು ಆ ದಿನದ ವಿಧಿ. ಮಾಡುತಿದ್ದ ಕೆಲಸವನ್ನಲ್ಲಿಗೇ ಬಿಟ್ಟು ಹೊರಗೆ ಬಂದು ಬಿಟ್ಟೆ. ಮನಸಲ್ಲೇ ತೇಜಸ್ವಿಯವರ ಆತ್ಮಕ್ಕೆ ಶಾಂತಿ ಕೋರಿದೆ. ಗೆಳೆಯರೀರ್ವರಿಗೆ - ತೇಜಸ್ವಿ ಅಭಿಮಾನಿಗಳಿಗೆ ಕರೆ ಮಾಡಿ ಒಬ್ಬರಿಗೊಬ್ಬರು ಸಾಂತ್ವಾನ ಹೇಳಿ ಪುನ: ಕೆಲಸಕ್ಕೆ ಮರಳಿದೆ. ಆಗಲೇ ಹೊಳೆದುದು ಈ ಲೇಖನದ ಶೀರ್ಷಿಕೆ- "ಪೂರ್ಣಚಂದ್ರ ರಜಾ ಹಾಕಿದ........."
ಶ್ರೀ ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಜನಿಸಿದ್ದು ಸೆಪ್ಟೆಂಬರ್ ೮, ೧೯೩೮ ರಂದು. ತಾಯಿ ಹೇಮಾವತಿ, ತಂದೆ ಕರ್ನಾಟಕದ ರಸ ಋಷಿಗಳಲ್ಲೊಬ್ಬರಾದ ಮೊದಲ ಜ್ನಾನಪೀಠ ಪ್ರಶಸ್ತಿ ವಿಜೇತ ದಿವಂಗತ ಶ್ರೀ ಕುವೆಂಪು ರವರು. ಸಿಹಿಮೊಗ್ಗೆ (ಶಿವಮೊಗ್ಗ) ಹಾಗು ಮೈಸೂರುಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದರು ತೇಜಸ್ವಿಯವರು. ಎಂ.ಎ ಕನ್ನಡ(ಆನರ್ಸ್) ಪದವಿ ಅವರ ಅತ್ಯುಚ್ಚ ಪದವಿಯಾಗಿತ್ತು-ಉತ್ತೀರ್ಣರಾದವರಲ್ಲಿ ಮೊದಲಿಗರಾಗಿದ್ದರು. ತಂದೆಯ ಆಸೆ... ಮಗನನ್ನು ತಮ್ಮಂತೆಯೇ ಒಬ್ಬ ಪ್ರಾಧ್ಯಾಪಕರನ್ನಾಗಿ ಮಾಡಬೇಕೆಂಬುದು. ಊಹುಂ..... ತೇಜಸ್ವಿಯವರು ತಂದೆಯ ಮಾತಿಗೆ ಜಗ್ಗಲೇ ಇಲ್ಲ. ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸಾಹಿತ್ಯದ ಸೇವೆ ಮಾಡಿದರು.
ನಮ್ಮಲ್ಲಿ ಒಂದು ಪ್ರಭೇಧದ ಜನರಿರುತ್ತಾರೆ. ಅವರನ್ನು "ಬುದ್ಧಿಜೀವಿಗಳು" ಎಂಬುದಾಗಿ ಸಂಬೋಧಿಸುತ್ತಾರೆ. ನೋಟದಲ್ಲೇ ಸಿಡುಕು ಸ್ವಭಾವದವರು ಎಂಬುದು ಮನದಟ್ಟಾಗುತ್ತದೆ. ಮೀಸೆ ಗಡ್ಡದ ಪ್ರಮಾಣ ಹೆಚ್ಚಿರುತ್ತದೆ. ಜಗತ್ತಿನ ಒಳಿತು ತಮ್ಮಿಂದಷ್ಟೇ ಸಾಧ್ಯ, ತಮ್ಮ ಒಣ ಅರ್ಥವಿಹಿನ ಮಾತುಗಳೇ ಶ್ರೇಷ್ಠ ಎಂದು ತಿಳಿದುಬಿಟ್ಟಿರುತ್ತಾರೆ. ಬಹುತೇಕವಾಗಿ ಕಮ್ಮ್ಯುನಿಸ್ಟ್, ಸೋಷಿಯಲಿಸ್ಟ್ ಪಂಥಕ್ಕೆ ಸೇರುವ ಇವರು ಜಾತಿ, ರಾಜಕಾರಣ, ವ್ಯಕ್ತಿ ನಿಂದನೆಗೆ ಎತ್ತಿದ ಕೈ. ಅಂಥವರ ವ್ಯಕ್ತಿತ್ವದ ಸಾಲಿಗೆ ಸೇರದೆ, ತಮ್ಮದೇ ಆದ ವಿಶಿಷ್ಟ ರೀತಿ-ರಿವಾಜು ರೂಪಿಸಿಕೊಂಡ ತೇಜಸ್ವಿಯವರೂ ಬುದ್ಧಿಜೀವಿಗಳೇ. ಆಗಿನ ಕಾಲದ ಶ್ರೇಷ್ಠ ಸೋಷಿಯಲಿಸ್ಟಗಳಾದ ಕಡಿದಾಳು ಶಾಮಣ್ಣ, ರಾಮ್ ಮನೊಹರ ಲೊಹಿಯಾ, ಜಯಪ್ರಕಾಶ್ ನಾರಾಯಣ್ (ಜೇಪಿ) ಇವರುಗಳ ಅನುಯಾಯಿಯಾದ ತೇಜಸ್ವಿಯವರು ಯಾವ ವಿಷಯದಲ್ಲೂ ಮುಲಾಜು ತೋರಿಸದೇ ಸಮ ತರ್ಕಕ್ಕೆ ಇಲಾಜು ಸೂಚಿಸುತ್ತಿದ ಇವರ ಸ್ವಬಾವ ಗಮನಾರ್ಹ. ರಾಜ್ಯದ, ಭಾಷೆಯ ಒಳಿತಿಗಾಗಿ ಸದಾ ಹೋರಾಡುತ್ತಿದ್ದ ತೇಜಸ್ವಿಯವರು ಸ್ವಲ್ಪ ವರಟು ಸ್ವಭಾವದವರೆಂದು ಕೆಲವು ದೃಷ್ಟಾಂತಗಳಿಂದ ತಿಳಿಯಬಹುದು. ಮೂಡಿಗೆರೆಯ ಮನೆಯಲ್ಲಿದ್ದತಮ್ಮ ಸ್ಕೂಟರನ ಹಿಂದಿನ ಸೀಟನ್ನೂ ಕಿತ್ತು "ಥಾತ್ ಸೀಟ್ ಇದ್ರೆ ಡ್ರಾಪ್ ಕೊಡು ಅಂತ ಕೆಳ್ತಾರೆ. ಕೂರಿಸ್ಕೊಂಡ್ರೆ ಬ್ಯಾಡದೇ ಇರೊ ತಲೆಹರಟೆ ಮಾಡ್ತಾರೆ" ಎಂದು ಒಮ್ಮೆ ಹೇಳಿದ್ದರಂತೆ. ಕಪಟ, ವಂಚನೆ, ತಿಳಿಯದ ತೇಜಸ್ವಿ, ತರ್ಕಕ್ಕೆ ಬಿದ್ದು ತಮ್ಮ ಆತ್ಮೀಯ ಗೆಳೆಯರಾದ ಪಿ. ಲಂಕೇಶ, ರೈತ ಮುಖಂಡ-ಧುರೀಣ ಪ್ರೊ ನಂಜುಂಡಸ್ವಾಮಿ ಯವರೊಂದಿಗೂ ವೈರತ್ವ ಬೆಳೆಸಿಕೊಂಡಿದ್ದರು. ಇತ್ತೀಚೆಗೆ ಬೆಳಗಾವಿಯ ಮೇಯರ್ ಮೊರೆಯ ಮೋರೆಗೆ ಬೆಂಗಳೂರಿನಲ್ಲಿ ಡಾಂಬರು ಬಳೆದಾಗ, ತೇಜಸ್ವಿಯ ಪ್ರತಿಕ್ರಿಯೆ ಹೀಗಿತ್ತು. "ಅಲ್ರೀ ಇಂತಹ ಕನ್ನಡ ದ್ರೋಹಿಗಳ ಮುಖಕ್ಕೆ ಡಾಂಬರು ಹಚ್ಚದೇ ಇನ್ನೆನ್ ಫ಼ೇರ್ ಅಂಡ್ ಲವ್ಲಿ ಹಚ್ಚಬೇಕಾ?"
ತೇಜಸ್ವಿಯವರ ತಂದೆ, ಕುವೆಂಪು ಖ್ಯಾತ ಲೇಖಕರೂ, ಮೇಧಾವಿಗಳೂ, ಮಾನಸ ಗಂಗೊತ್ರಿಯಲ್ಲಿ ಉಪಕುಲಪತಿಗಳಾಗಿ ನಿವೃತ್ತಿಯಾದವರು. ಒಟ್ಟಿನಲ್ಲಿ ವಿಷೇಷಣಗಳ ಸರಮಾಲೆಯನ್ನೇ ಅಲಂಕರಿಸಿದವರು. ಅಂಥವರ ಸುಪುತ್ರ ತೇಜಸ್ವಿ ತಂದೆಯ ವಿಚಾರಧಾರೆಯನ್ನು ತರ್ಕಿಸಿ ತಮ್ಮದೇ ಆದ ವಿನೂತನ ಸಾಹಿತ್ಯಿಕ ಛಾಪು ಮೂಡಿಸಿದವರು. ಕೇವಲ ತಂದೆಯ ಹೆಸರಿನಿಂದಲೇ ಬಹಳಷ್ಟು ಕೀರ್ತಿ ಸಂಪಾದಿಸಬಹುದಾಗಿದ್ದರೂ, ಒಂದು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿರಬೇಕಾದ ಸಮಗ್ರ ಅರ್ಹತೆ- ಪದವಿ, ಜ್ನಾನ, ಸಾಹಿತ್ಯ, ಶಿಸ್ತುಗಳಿದ್ದರೂ ಎಲ್ಲದಕ್ಕೂ ವಿದಾಯ ಹೇಳಿ ಯಾರ ಹಂಗಿನಲ್ಲೂ ಇರದೆ, ಚಿಕ್ಕಮಗಳೂರಿನ ಮೂಡಿಗೆರೆಯೆಂಬಲ್ಲಿ "ನಿರುತ್ತರ" ಎಂಬ ತೋಟ ಪ್ರಾರಂಭಿಸಿ ಬೇಸಾಯ-ಕೃಷಿ, ಸಾಹಿತ್ಯ-ಕೃಷಿ ಎರಡರಲ್ಲೂ ಅಪಾರ ಸಾಧನೆಗೈದಿದ್ದರು. ಹಾಗಗಿಯೇ ತೇಜಸ್ವಿಯವರು ನಮಗೆ ಒಬ್ಬ ಸಾಹಿತಿಯಾಗಿ, ಪರಿಸರ ಪ್ರೇಮಿಯಾಗಿ,ತಗ್ನರಾಗಿ ಪಕ್ಷಿ ತಗ್ನರಾಗಿ ವರ್ಣಚಿತ್ರಕಾರರಾಗಿ, ಹವ್ಯಾಸಿ ಚಿತ್ರಕಾರರಾಗಿ, ನೈಜ ಬುದ್ಧಿಜೀವಿಯಾಗಿ, ಪರಿಚಯವಾಗಿದ್ದರೆ. ಚಲನಚಿತ್ರಗಳಿಂದ ದೂರ ಉಳಿಯದೇ ಕುಬಿ ಮತ್ತು ಇಯಾಲ, ತಬರನ ಕಥೆ, ಅಬಚೂರಿನ ಪೊಸ್ಟ್ ಆಫ಼ೀಸ್ ಗಳ ಕಥೆಗಳನ್ನು ಚಲನಚಿತ್ರವಾಗಿಸಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
ಅವರ ಹಲವಾರು ಲೇಖನಗಳಲ್ಲಿ "ಕರ್ವಾಲೊ" "ಕಿರಗೂರಿನ ಗಯ್ಯಾಳಿಗಳು" "ಅಣ್ಣನ ನೆನಪು" "ಪರಿಸರದ ಕಥೆ" ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಗಳು. ಕೇಂದ್ರ ಸಾಹಿತ್ಯ ಅಕೇಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕೇಡಮಿ ಪ್ರಶಸ್ತಿ, ಪರಿಸರ ವಿಜ್ನಾನಿ ಪ್ರಶಸ್ತಿ, ಪಂಪ ಪ್ರಶಸ್ತಿ ಗಳನೆಲ್ಲಾ ಅರಿಸಿದವರು ಪ್ರಾಯಷ ಕೆಲವೇ ದಿನಗಳಲ್ಲಿ ಜ್ನಾನಪೀಠ ಪ್ರಶಸ್ತಿಯನ್ನೂ ಅಲಂಕರಿಸುತ್ತಿದ್ದರೆನೋ.....
ಈ ಕಿರು ಲೇಖನ ಓದಿದ ನಂತರ ’ಪೂಚಂತೆ’ ಬಗ್ಗೆ ಇನ್ನು ಹೆಚ್ಚು ತಿಳಿಯಲೆತ್ನಿಸಿ, ಅವರ ಕೃತಿಗಳನ್ನು ಓದಿದರೆ ಅದು ನೀವು ತೇಜಸ್ವಿಯವರಿಗೆ ತೋರುವ ಗೌರವ........


ಲೇಖನದ ಟೀಕೆಗಾಗಿ ಸದಾ ಕಾಯುವ
ಪ್ರಕೊಪ
(ಪ್ರವೀಣ್ ಪಟವರ್ಧನ್)