
Sunday, November 2, 2008
Sunday, August 3, 2008
ಎಲ್ಲರಿಗೂ ನಮಸ್ಕಾರ!! ಹೊಸ ಅನುಭವ ಪಡೆದ ನಂತರ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವುದು ನನ್ನ ಹವ್ಯಾಸಗಳಲ್ಲಿ ಒಂದು. ಅಂತಹ ಹವ್ಯಾಸವೇ ಮನುಶ್ಯನನ್ನು ಒಬ್ಬ ಅತ್ಯುತ್ತಮ ಕತೆಗಾರನಾಗಿಯೋ, ಕವಿಯಾಗಿಯೊ, ಲೇಖಕನಾಗಿಯೋ ಅಥವಾ ಕಡೆಯ ಪಕ್ಷ "ಕ್ಯಾರಿಕಾಚರ್" ಆಗಲು ಅನುವು ಮಾಡಿಕೊಡುತ್ತದೆ. ನನಗೆ ಆ ಕೊನೆಯ ವ್ಯಕ್ತಿತ್ವ ಹೆಚ್ಚು ಸಂತೋಷ ನೀಡುತ್ತದೆ. ತಿಳಿದುಕೊಳ್ಳಲೋಸುಗ- "ಕ್ಯಾರಿಕಾಚರ್" ಎಂದರೆ, ಪ್ರಸ್ತುತ ಇರುವ ಒಂದು ವಿಚಾರವನ್ನು ಅತಿ ವ್ಯಂಗ್ಯವಾಗಿ ತಿಳಿಸುವುದು. ಇಂತಹ ಅಣಕಚಿತ್ರಗಳು ಹತ್ತು ಜನರಿಗೆ ಖುಷಿ ನೀಡಬಹುದು. ಆದರೆ ಆ ಒಬ್ಬ ಮನುಶ್ಯನನ್ನು ನೋಯಿಸಬಹುದು. ಆದ್ದರಿಂದ ಇದು ತಪ್ಪೆಂದು ನೀವು ವಾದಿಸಬಹುದು. ಆದರೆ ನನ್ನ ದೃಷ್ಟಿ ಕೇವಲ "ಸೆಲ್ಫ ಕ್ಯಾರಿಕಾಚರ್" ಎಡೆಗೆ. ಅರ್ಥಾತ್ ಜನರನ್ನು ನಗಿಸಲೋಸುಗ ನಿಮ್ಮನ್ನು ನೀವು ವ್ಯಂಗ್ಯವಾಗಿ ಬಿಂಬಿಸಿಕೊಂಡರೆ ಇನ್ನು ಚೆನ್ನಾಗಿ ಇಷ್ಟಪಡುತ್ತಾರೆ. ಬ್ಲಾಗ್ ಗೆ ಪ್ರವೇಶ ಪಡೆಯದ ನನ್ನ ಇತರೆ ಹಲವು ಲೇಖನಗಳು ಪ್ರಕರಣಗಳನ್ನು ವ್ಯಂಗ್ಯ ರಸದಲ್ಲಿ ಮುಳುಗಿಸುತ್ತದೆ. ವ್ಯಂಗ್ಯ ಚಿತ್ರಕಾರರಾದ ಚಿಕ್ ಯಂಗ್ (ಬ್ಲಾಂಡೀ ಖ್ಯಾತಿ), ಸೆಗಾರ್ (ಪಾಪಯಿ ಖ್ಯಾತಿ) ಎಲ್ಲರೂ ತಮ್ಮ ತಮ್ಮ ವ್ಯಂಗ್ಯ ಮಾಡಿಕೊಂಡವರೇ. ಭಾರತದಲ್ಲಿಯೂ ಅಂತಹ ಒಬ್ಬ ಬರಹಗಾರರಿದ್ದಾರೆ. ಅವರು ಖುಷವಂತ್ ಸಿಂಗ್. ಸರದಾರಜೀ ಜೋಕ್ಸ್ ಗಳನ್ನು ಮಾರುಕಟ್ಟೆ ಮಾಡಿದ ಮಹಾತ್ಮ. ನಾನು ನೋಡಿರುವ ಹಾಗೆ ತಮ್ಮ ಜನಾಂಗದ ಬಗ್ಗೆಯೇ ತಮಾಷೆ ಮಾಡಿಕೊಂಡು ಇನ್ನು ವಿಲಾಸಿ ಇರುವ ಜನಾಂಗ ಸಿಖ್. ಇವೆಲ್ಲಾ ಪೀಟಿಕೆಯಷ್ಟೆ. ಒಂದು ಶುಕ್ರವಾರ ಪ್ರಸಾದ್ ಕೊಟ್ರಾ ಜೊತೆಗೆ ಹಾಗೆ ಸುಮ್ಮನೆ ಮಾತಾಡುತ್ತಿದ್ದಾಗ, ಟೊನಿ ಒಳನುಗ್ಗಿ, ಬುಧವಾರ "we go to Alibabas on Wednesday. Great place to hangout you know" ಎಂದರು. ಟೋನಿ, ನಾನು ಒಟ್ಟಿಗೆ ಕೆಲಸ ಮಾಡುವವರೇ ಆದರೂ, ನನ್ನ ಅವರ ಒಡನಾಟ ಅಷ್ಟಿರಲಿಲ್ಲ. ಕೆಲಸದಲ್ಲಿ ಪ್ರಸಾದ್, ನಾನು ಅಷ್ಟೇನು ಜೊತೆಗಿಲ್ಲದಿದ್ದರೂ ಇಬ್ಬರೂ ತಕ್ಕಮಟ್ಟಿಗೆ "close" ಅಂತನೇ ಹೇಳಬಹುದು. ಪ್ರಸಾದವರಿಂದ ನನಗೂ ಒಂದು ಆಮಂತ್ರಣ ದೊರೆಯಿತು. ಅನಿರೀಕ್ಷಿತ ಆಮಂತ್ರಣದ ನಂತರ ನನ್ನ ಅಲಿಬಾಬಾ ಊಟಕ್ಕೆ ತಯಾರಾಗುತ್ತಿದ್ದೆ. ಬುಧವಾರ ಬಂದೇಬಿಟ್ಟಿತು. ನನ್ನ ಅದೃಷ್ಟಕ್ಕೆ ಅಂದೇ ಪ್ರಸಾದ್ ರಜದಲ್ಲಿದ್ದರು. ಟೋನಿ ಹಾಗು ನನಗೆ ಸಂಯುಕ್ತ ಸ್ನೇಹಿತರಾದ ಜಾನ್ ಸ್ಪೆನ್ಸ್, ಗ್ರೆಗ್ ಹಾರ್ನ್, ಜೇಸನ್ ಬ್ರೂಕ್ಸ್, ಅಬ್ದುಲ್ ಕೆತಾನಿ, ವಿಕ್ಟರ್ ಅಲೆಸಾಂದ್ರ, ರಾನ್ ಮೋರ್ಗನ್ ಎಲ್ಲರೂ ಅಲಿಬಾಬಾಗೆ ಹೊರಟೆವು. ಟೆಕ್ಸಾಸ್ ಇಂಸ್ಟ್ರುಮೆಂಟ್ಸ್, ಡಾಲಸ್ ನಿಂದ ಎಂಟು ಹತ್ತು ಮೈಲಿ ಇರುವ ಅಲಿಬಾಬಾಗೆ ನಮ್ಮ ಪ್ರಯಾಣ, ಮಧ್ಯಾನ್ಹದ ಬುಫ್ಫೆ ಗೆ . ಕಾರಿನಲ್ಲಿ ಹೊರಟಾಗಿನಿಂದಲೂ ಒಂದೇ ಸಂಕಟ ನನಗೆ, ನನ್ನ ಜೊತೆ ಒಬ್ಬನೂ ಸಸ್ಯಹಾರಿಯೇ ಇಲ್ಲವೆಂದು. ನನ್ನನ್ನು ಹೊರತುಪಡಿಸಿ, ಎಲ್ಲರೂ ಮನುಷ್ಯನೊಬ್ಬನ್ನನ್ನು ಬಿಟ್ಟು ಎಲ್ಲವನ್ನು ತಿಂದು ಅರಗಿಸಿಕೊಳ್ಳಬಲ್ಲ "epicureans"- ಸುಖಭೋಗಿಗಳು. ನಾನೊಬ್ಬ ದಕ್ಷಿಣ ಭಾರತದ ಪಕ್ಕಾ ಬ್ರಾಹ್ಮಣ ಕುಟುಂಬದವನು. ಮಾಂಸಹಾರಿ, ಸಸ್ಯಹಾರಿ ಗಳನ್ನು ವಿಂಗಡಿಸಲು ಈ ವೇದಿಕೆ ಬಳಸಿಕೊಳ್ಳುತ್ತಿಲ್ಲ. ಆಹಾರ ಅವರವರ ರುಚಿಗೆ ಬಿಟ್ಟದ್ದು. ಎಲ್ಲರಿಗೂ ತಮ್ಮ ತಮ್ಮ ಆಹಾರದ ಬಗ್ಗೆ ಆಸಕ್ತಿ ಇರುತ್ತದೆ. ಅವರವರ ಇಷ್ಟಾನುಸಾರವಾಗಿ ಅಹಾರಾಭ್ಯಾಸ ಮಾಡುತ್ತಿರುತ್ತಾರೆ. ನಾನಿಲ್ಲಿ ಹೇಳಲೆತ್ನಿಸುತ್ತಿರುವಿದು ನನ್ನ ಸಂದಿಗ್ದ ಪರಿಸ್ಥಿತಿಯಷ್ಟೆ. ಹೆಚ್ಚು ಕಡಿಮೆಯಾಗಿ ಅವರ ತಟ್ಟೆಯಿಂದ ನನ್ನ ತಟ್ಟೆಗೆ "ಮಾಂಸದ current transfer" ಆದರೆ ಅಂತ. current ಆದರೂ ಪರವಾಗಿಲ್ಲ, ಮಾಂಸವೇ transfer ಆದರೆ?? ಆಮೇಲೆ ತಿಳಿಯದೇ ನಾನು ಮಾಂಸ ತಿಂದರೆ?? ಎನೇನೊ ಆಲೋಚನೆಗಳು. ಮತ್ತೇನೋ ನೆನಪುಗಳು. ಕಾರಿನಲ್ಲಿ ಜಾನ್ ಸ್ಪೆನ್ಸ್ ತನ್ನ ವೆರ್ನಾಕುಲಾರ್ ಇಂಗ್ಲಿಷ್ ನಲ್ಲಿ ಸಾಕಷ್ಟು ತಮಾಷೆ ಮಾಡಿದರೂ, ನಾನು ಏನೂ ಅರ್ಥ ಮಾಡಿಕೊಳ್ಳಲಾಗದೇ ನನ್ನ ಯೋಚನಾವಿಲಾಸದಲ್ಲಿ ಮುಳುಗಿದ್ದೆ. ಅವರಾರಿಗೂ ನನ್ನ ಪರಿಸ್ಥಿತಿ ಅರ್ಥವಾಗದು. ಜಾನ್ ಕಡೆಗಂತೂ ಪ್ರವೀಣ್ ಊಟದ ಖರ್ಚಿಗೆ ಹೆದರುತ್ತಿದ್ದಾನೆ. ಅವನ ಊಟದ ಖರ್ಚು ನನ್ನದೆ ಎಂದದ್ದೂ ನನಗೆ ಅರ್ಥವಾಗದೆ ಹುಸಿನಗು ಬೀರಿದ್ದೆ. (ಅಮೇರಿಕೆಯಲ್ಲಿ ಎಂಥಹದ್ದೇ ಪಾರ್ಟಿಯಾದರೂ ಅವರವರ ಊಟದ ಖರ್ಚನ್ನು ಅವರವರೇ ಭರಿಸುತ್ತಾರೆ. ಟ್ರೀಟ್ ಎಂದರೆ ಎನೂ ಎನ್ನುವುದೂ ಗೊತ್ತಿರುವುದಿಲ್ಲ. ಆದ್ದರಿಂದ ಜಾನ್ ಹೇಳಿದ್ದಕ್ಕೆ ನನ್ನ ಮೌನ-ಹುಸಿ ನಗು ಎಲ್ಲರಿಗೂ ವಿಚಿತ್ರವೆನಿಸುವುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ). ಭಾರತದ ಸಸ್ಯಹಾರಿಗೂ ಅಮೇರಿಕದ ಸಸ್ಯಹಾರಿಗೂ ಬಹಳ ಅಂತರವಿದೆ. ಅಂದು ನಾನು ಊಟಕ್ಕೆ ಒಪ್ಪಿಕೊಂಡದ್ದು ಪ್ರಸಾದ್ ಎಂಬ ಭಾರತೀಯ ಸಸ್ಯಹಾರಿಯೂ ನನ್ನೊಟ್ಟಿಗಿದ್ದಾರೆಂದು. ನನಗೊಬ್ಬ ಕಂಪನಿಯಿದೆ ಎಂದು. ನನಗೇನು ಗೊತ್ತಿತ್ತು ಪ್ರಸಾದ್ ಅವರಿಗೆ ಅಂದೇ ಮೀಟಿಂಗ್ ಅಟಗಾಯಿಸುತ್ತದೆ ಎಂದು. ೧೨:೩೦ ಗೆ ಅಲಿಬಾಬಾ ಕದವನ್ನು "ಖುಲ್ ಜಾ ಸಿಮ್ ಸಿಮ್" ಎಂದು ಘರ್ಜಿಸುತ್ತಾ ಒಳಗೆ ಹೋದೆವು. ನನ್ನ ಊಟದ ಖರ್ಚನ್ನು ಕೆತಾನಿ ಭರಿಸಿದನು. ಜಾನ್ ಆಗಲೂ "ಪ್ರವೀಣ್ ಈಗ ನೀನು ನಿರಾಳ ಅಲ್ವಾ.... ನೀನು ದುಡ್ಡೇ ಕೊಡಲಿಲ್ಲವಲ್ಲ " ಎಂದ. ಬುಫ್ಫೆ ಗೆ ನನ್ನ ತಟ್ಟೆ ಹಿಡಿದು ಒಳಗೆ ಹೊರಡಲು ಬಹಳ ಆನಂದವಾಯಿತು. ಒಂದು ಕಡೆ ಕೇವಲ ಶಾಕಾಹಾರಿ, ಲೆಟ್ಟ್ಯುಸ್(ಕೋಸು), ಬೀಟ್ ರೂಟ್, ಕ್ಯಾರಟ್, ಟೊಮಾಟೊ, ಮೂಲಂಗಿ, ಪೆಪ್ಪೆರ್ (ಮೆಣಸಿನ ಕಾಯಿ). ದೇವರೆ ಕಣ್ಣುಬಿಟ್ಟ್ಯಲ್ಲಪ್ಪ ಅಂತ ಧನ್ಯನಾಗಿ ತಟ್ಟೆಯಲ್ಲಿ ಆ ಊಟವನ್ನು ಪೇರಿಸಲಾರಂಭಿಸಿದೆ. ಆಗ ಜಾನ್ ಅಷ್ಟು ಹೊತ್ತು ಮಾಡಿದ ತಮಾಷೆಯೆಲ್ಲಾ ಅರ್ಥವಾಯಿತು. ಆದರೆ ನಡೆದುಹೋದದ್ದನ್ನು ಯೋಚಿಸಿ ಪ್ರಯೋಜನವಿಲ್ಲವೆಂದು ತಿಳಿದು ನನ್ನ ಊಟ ಪ್ರಾರಂಬಿಸಿದೆ. ಗ್ರೆಗ್ ತನ್ನ ತಟ್ಟೆಯಲ್ಲಿ ಚಿಕೆನ್ ತಂದಿಟ್ಟು ನನ್ನ ಎಡ ಪಕ್ಕ ಕೂತನು. ಕೆತಾನಿ ಲ್ಯಾಂಬ್ ತಂದು ಎದುರಿನಲ್ಲಿ ಕೂತನು. ಹಾಗೆಯೇ ರೋನ್ beef ತಂದರೆ, ಜೇಸನ್ ಪೋರ್ಕ್ ತಂದರೆ, ವಿಕ್ಟರ್, ಜಾನ್ ವೀಲ್ ತಂದರು. ಪಕ್ಕ ಮಾಂಸದ ಅಂಗಡಿ ನನ್ನ ಸುತ್ತಲೂ ತುಂಬಿತ್ತು; "BON APPETIT" ಎನ್ನುತ್ತಾ ಎಲ್ಲರೂ ತಿನ್ನಲಾರಂಭಿಸಿದರು. ಅಂತಹ ಒಂದು ವಿಶಿಷ್ಟ ಊಟ, ಸಮಾರಂಭ, ಸಂಭ್ರಮ ನಾನೆಂದೂ ಕಂಡಿರಲಿಲ್ಲ. ನನ್ನ ಪ್ರಥಮ ತರಕಾರಿ ಉಪಹಾರ ಆದ ನಂತರ ಸ್ವಲ್ಪ ಒಳ್ಳೆಯ ಖಾದ್ಯ ದೊರೆಯಿತು. ಕಡಲೆ ಬೇಳೆ, ಹೆಸರು ಬೇಳೆ, ಕಾಬುಲ್ ಕಡಲೆ, ಇವುಗಳ ’ಹ್ಯೂಮಸ್" ಅರ್ಥಾತ್ ಚಂದವಾಗಿ ರುಬ್ಬಿದ, ಆಲಿವ್ ತೈಲದಿಂದ ಮಾಡಿದ ಚಟ್ನಿ; ನಮ್ಮಲ್ಲಿ ನಾನ್, ಪರಾಠ, ಸಿಗುವಹಾಗೆ ಅಲ್ಲಿ ಪೀಟ ಬ್ರೇಡ್, Falafel ಬ್ರೇಡ್, ಸ್ಪೈಸಿ ಬ್ರೇಡ್ ಇವೆಲ್ಲಾ ಇತ್ತು. ಸ್ಪೈಸಿ ಬ್ರೇಡ್ ಅಂತೂ ನಮ್ಮ ಮಸಾಲ ನಾನ್ ನೆನಪುಮಾಡುತ್ತಿತ್ತು. ಝಾಝಿಕಿ ಅಂದರೆ ಸೌತೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಇವುಗಳ ರಾಯತ ಎಂದೆಲ್ಲವಾಗಿ ಅರ್ಥವಾಗ ತೊಡಗಿತು. Fatoosh ಅಂದರೆ ನಮ್ಮ ಮೆಸ್ ನಲ್ಲಿ ಮಾಡುವ ಬ್ರೇಡ್ ಉಪ್ಪಿಟ್ ನೆನಪುಮಾಡುತ್ತಿತ್ತು. ಇವೇ ನನ್ನ ಎರಡನೇ, ಮೂರನೇ, ನಾಲ್ಕನೇ ಊಟದ ಗಳಾದವು. ಪುನಃ ಊಟಕ್ಕೆ ಹೋಗಿ ಕೂತರೆ ಪಕ್ಕದ ತಟ್ಟೇಗಳಲ್ಲಿ ಮತ್ತದೇ ಬೀಫ಼್, ವೀಲ್, ಪೊರ್ಕ್. ಊಟದ ಮಧ್ಯದಲ್ಲಿ ಆಫ಼ಿಸ್ ಕೆಲಸಗಳ ಚಕಾರವೆತ್ತದೇ ದೇಶ, ವೇಷ, ಭಾಷೆ ಎಲ್ಲದರ ಬಗ್ಗೆಯೂ ಮಾತಾಡುತ್ತಾ ಅವರವರ ಊಟಗಳನ್ನು ಇಷ್ಟಪಡುತ್ತಾ ಮೋಜು ಮಾಡಿದೆವು. ಮಧ್ಯೆ ಮಧ್ಯೆ ಗ್ರೇಪ್ ಲೀಫ಼್ಸ್ ಅಂದರೆ ದ್ರಾಕ್ಷಿ ಎಲೆಯ ನಡುವೆ ಅನ್ನ, ಮಸಾಲೆ ತುಂಬಿದ ಆಲಿವ್ ತೈಲದಲ್ಲಿ ಕರೆದ ಅತಿ ರುಚಿಕರ ಖಾದ್ಯ ಎಲ್ಲರೂ ಸೇವಿಸಿದೆವು. ಮಸಾಲ ಪುಲಾವ್, ಬಿರಿಯಾನಿ, ಬಕ್ಲಾವ (ಹಲ್ವ), ತಬೌಲಿ, ಬಾಬಾ ಘನೌಷ ಹೀಗೆ ಹತ್ತು ಹಲವು ಖಾದ್ಯಗಳನ್ನು ಅವರವರ ಇಷ್ಟಾನುಸಾರ ತಿಂದರು. ಸಿಹಿಯಾದ ರೈಸ್ ಪಡ್ಡಿಂಗ್ ತಿಂದು ಊಟ ಮುಗಿಸಿದೆವು. ಒಟ್ಟಿನಲ್ಲಿ ಹೇಳುವುದಾದರೆ ನಾವು ಅಂದು ಹೋದದ್ದು ಮೆಡಿಟರೇನಿಯನ್ ಶೈಲಿಯ ಊಟಕ್ಕೆ. ಮೆಡಿಟರೇನಿಯನ್ ಸಮುದ್ರದ ಸುತ್ತಲಿನ ದೇಶಗಳಾದ ಮಧ್ಯಪ್ರಾಚ್ಯ ಏಶಿಯಾ, ಸಿರಿಯಾ, ಗ್ರೀಸ್, ಇಜಿಪ್ಟ್, ಇಸರೇಲ್ ಈ ತರನಾದ ಊಟದ ಶೈಲಿಯನ್ನು ಪಾಲಿಸುತ್ತಾರೆ. ಊಟ ಕೇವಲ ಮಾಂಸಹರಿಗಳನ್ನು ಆಕರ್ಷಿಸುವುದಿಲ್ಲ ಪರಂತು ಸಸ್ಯಗಾರಿಗಳಿಗೂ ರಸದೌತಣ. ಹಿಂದೊಮ್ಮೆ ಡಾಲಸ್ ವಿಮಾನ ನಿಲ್ದಾಣದಲ್ಲಿ ಹಿರಿಯರಾದ ನರಸಿಂಹ ರಾವ್ ಜೊತೆಗೆ "ಮೆಡಿಟರೇನಿಯನ್ ರಾಪ್" ತಿಂದದ್ದು ನೆನಪಾಗುತ್ತದೆ. ಡಾಲಸ್ ನಲ್ಲೇ ನಮ್ಮ ಕಾರ್ಮಿಕ್ ಮಹಾಪ್ರಬಂಧಕರಾದ ಮಹಾಂತ್ ಶೆಟ್ಟಿ ಇಂತಹದ್ದೊಂದು ಖಾನವಳಿಗೆ ಕರೆದುಕೊಂಡು ಹೋಗಿದ್ದು ಇನ್ನೂ ಅಚ್ಚಳಿಯದಂತೆ ಉಳಿದುಬಿಟ್ಟಿದೆ.
Tuesday, June 24, 2008
ಬರಹ
ಬರಹದಲ್ಲಿ ಎಷ್ಟು ತ್ರಾಣವಿದೆ ಎಂದು ನಂಬುವುದಕ್ಕೆ ಅಸಾಧ್ಯವಾಗುತ್ತದೆ. "ಕತ್ತಿಗಿಂತ ಲೇಖನಿ ಹರಿತವಾದುದು" ಎಂಬುದು ಮುತ್ತಜ್ಜನ ಕಾಲದ ಸಾಮತಿ. ಈ ಸಾಲುಗಳನ್ನು ಎಡ್ವರ್ಡ್ ಬುಲ್ವೆರ್ ಲೈಟನ್ ತನ್ನ ನಾಟಕವಾದ "ರಿಶೇಲೂ" ನಲ್ಲಿ ಮೊಟ್ಟಮೊದಲಿಗೆ ಬಳಸಿದನು. ಇಂದಿಗೂ ಎಲ್ಲರೂ ಯಥೆಚ್ಚವಾಗಿ ಬಳಸುತ್ತರೆ, ಈ ಸಾಲುಗಳನ್ನು. ಆರ್ಮನ್ಡ್ ರಿಶೇಲು ಹದಿನಾರನೆಯ ಶತಮಾನದ France ದೇಶದ ಪ್ರಭಾವಿ ಮಂತ್ರಿಯಾಗಿದ್ದ. ರಾಜ ಲೂಯಿ-೩ ಇವನ ಕಾಲದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ರಿಶೇಲು, ಪರಿಣಿತ ನೀತಿಶಾಸ್ತ್ರಜ್ನ್ಯ ಹಾಗು ರಾಜಕೀಯ ಮುತ್ಸದ್ದಿ. ಈತನನ್ನೇ ಆಧರಿಸಿ ಎಡ್ವರ್ಡ್ ಬುಲ್ವೆರ್ ಲೈಟನ್ ೧೯ನೇ ಶತಮಾನದಲ್ಲಿ ಲಂಡನ್ ನಗರದಲ್ಲಿ "ರಿಶೇಲೂ" ನಾಟಕವನ್ನು ತಯಾರಿಸಿದ. ಎಷ್ಟೇ ಪ್ರಭಾವಿ ಗಾದಿಯನ್ನು ಎಡ್ವರ್ಡ್ ನಮಗೆ ಕೊಟ್ಟಿದ್ದರೂ ಈತನ ಹೆಸರು "ಕೆಟ್ಟ ಬರಹ"ಗಳ ಬರಹಗಾರರ ಯಾದಿಗೆ ಸೇರಿಹೋಗಿದೆ.
ಈಗಿನ ಕಾಲಕ್ಕೂ ಕೇವಲ ಪತ್ರಿಕೋದ್ಯಮ ಹಾಗು ರಾಜಕೀಯ-ಗೂಂಡಾಗಿರಿ (ರಾಜಕೀಯ, ಗೂಂಡಾಗಿರಿ ಎರಡೂ ಒಂದೇ ಎಂದು ನೀವು ಸಾಧಿಸಲೆತ್ನಿಸಿದರೆ ನಾನು ನಿಮ್ಮನ್ನು ಸಮರ್ಥಿಸುತ್ತೇನೆ. :-) ) ನಡುವಿನ ಸಂಬಂಧಕ್ಕೆ ಬಳಸಲಾಗುತ್ತಿರುವ "ಕತ್ತಿಗಿಂತ ಲೇಖನಿ ಹರಿತವಾದುದು" ಎಂಬ ಗಾದೆಯನ್ನು ಈ ಕಾಲಕ್ಕೆ ಬದಲಿಸಿಕೊಳ್ಳಲೋಸುಗ ಈ ಲೇಖನ.
ಲೇಖನಿ ಕತ್ತಿಗಿಂತ ಹರಿತವೋ ಎನೋ ನಾನರಿಯೆ. ಆದರೆ ಲೇಖನಿಯ ಹರಿತವನ್ನು ಬಲ್ಲೆ. ಹರಿತ ಎಂದ ಕೂಡಲೆ ಯಾರನ್ನಾದರೂ ಇರಿದು ಕೊಲ್ಲುವಂತಹದ್ದು ಎಂಬುದಾಗಿ ಅಲ್ಲ. ಅದಕ್ಕೆ ಏಕಾಂಗಿಯಾಗಿ ಇರುವ ಶಕ್ತಿ ಪ್ರಾಯಶಃ ಬೇರೆ ಯಾವ ವಸ್ತುವಿಗೂ ಇಲ್ಲ. ಪುಟ್ಟ ಕಾಗದದ ಮೇಲೆ ಎನೋ ಬರೆದದ್ದು ಮತ್ಯಾರಿಗೋ ಸಿಕ್ಕಿದ ಮೇಲೆ ಅದು "ಕಹಳೆ ಬಾಯಿಗೆ ಮುತ್ತಿಟ್ಟಂತೆ" ನೀವು ಕೇಳಬಹುದು- ಬರೆಯದೇಯೇ ಕೇವಲ ಆಡಿದ ಮಾತು ಸಹ ಎಷ್ಟಾದರೂ ಎಲ್ಲರಿಗೂ ಹರಡುತ್ತದೆ. ಆದರೆ ಮಾತು ಗಾಳಿಮಾತೂ ಆಗಿರಬಹುದು. ಅದಕ್ಕೆ ಸಮಂಜಸ ದಾಖಲಾತಿಯಾಗಲಿ, ಪುರಾವೆಯಾಗಲಿ ಇರುವುದಿಲ್ಲ. ಸಾಕ್ಷಿ ಇಲ್ಲದ್ದನ್ನು ಜನ ಅಷ್ಟು ಸುಲಭವಾಗಿ ನಂಬುವುದಿಲ್ಲ.
ಅಮೇರಿಕೆಯಲ್ಲಿ ಎರಡನೆಯ ಬಾರಿಗೆ ಬಂದಿರುವ ನಾನು, ಇತ್ತೇಚೆಗೆ ಒಂದು ಹೊಸ ವಿಷಯ ಅರಿತುಕೊಂಡೆ. ಕೆಲಸದ ಮೇರೆಗೆ ಒಬ್ಬನ ಕೋಣೆಗೆ ಹೋಗಬೇಕಿತ್ತು. ಮೂರ್ನಾಲ್ಕು ಬಾರಿ ಹೋಗಿ ಬಂದರೂ ಆತ ನನಗೆ ಸಿಗಲೇ ಇಲ್ಲ. ಕಡೆಗಂತೂ ಆತನೇ ನನ್ನ ಕೋಣೆಗೆ ಬಂದ. ಅವನನ್ನು ನೋಡಿದಾಕ್ಷಣ ನಾನು ಸಾಮಾನ್ಯವಾಗಿಯೇ "ನಿಮ್ಮ ಕೋಣೆಗೆ ಬಂದಿದ್ದೆ. ನೀವು ಇರಲಿಲ್ಲ" ಎಂದೆ. ಅದಕ್ಕೆ ಆತ ನನ್ನ ಮಾತನ್ನು ಅಷ್ಟಾಗಿ ನಂಬದೇ "......ಬಂದಿದ್ದೆ ಎಂದು ಎನಾದರು ಪುರಾವೆ ಇದೆಯಾ?.....ಮುಂದಿನ ಸರಿ ನೀನು ಬಂದಾಗ ನಾನಿರಲಿಲ್ಲ ಎಂದರೆ ಇಲ್ಲವಾದರೆ ಒಂದು ಈ-ಮೇಲ್ ಮಾಡಿಬಿಡು. ಆಗ ನಾನು ಎಲ್ಲಿದ್ದರೂ ನೀ ಬಂದಿದ್ದ ವಿಷಯ ತಿಳಿಯುತ್ತದೆ" ಎಂದನು. ಆಗಷ್ಟೆ ನನಗೆ ಅರ್ಥವಾಯ್ತು ಬರಹದ ಪುರಾವೆ.
ಕೇವಲ ಪುರಾವೆಯೊಂದೇ ಮುಖ್ಯ ಕಾರಣವಲ್ಲ ಬರಹಕ್ಕೆ. ಒಂದು ಕಾಲದಲ್ಲಿ ಕಾಗದ ಬರೆಯುವ ಸಂಪ್ರದಾಯ ಕೇವಲ ಸಂಬಂಧಿತರಿಗೆ ಅಥವಾ ಕಛೇರಿ ಅರ್ಜಿ ಇಷ್ಟಕ್ಕೆ ಸೀಮಿತವಾಗಿತ್ತು. ಸಂಪ್ರದಾಯ ಬೆಳೆದದ್ದರಿಂದ ಕಾಗದ ಸ್ನೇಹಿತರನ್ನು ತಲುಪುತ್ತಿತ್ತು. ಕೆಲವು ವರ್ಷಗಳ ನಂತರ ಪ್ರೇಮ ಪತ್ರದ ಗೀಳು ಪ್ರಾರಂಭವಾಯ್ತು. ವಯಸ್ಸಿಗೆ ಬಂದ ಎಲ್ಲರೂ ನಲ್ಮೆಗೊಂದು ಪ್ರೇಮ ಪತ್ರ ಬರೆಯಲಾರಂಭಿಸಿದರು. ಅವರೇ ಬರೆದರೋ, ಬೇರೆಯವರಿಂದ ಬರೆಸಿದರೋ ಅದು ಸೆಕಂಡರಿ. ಒಟ್ಟಿನಲ್ಲಿ ಬರೆದರು ಬರೆಸಿದರು. ಇದರಿಂದಾಗಿ ಹುಡುಗಿಯರನ್ನು ಬೇಳಿಸಿಕೊಂಡರು. Expressive ಅಲ್ಲದ ಹುಡುಗರು/ಹುಡುಗಿಯರು ಮಾತಿನಲ್ಲಿ ಪ್ರೀತಿ-ಪ್ರೇಮ ವರ್ಣಿಸಲಾಗದೆ ಸೋತು ಕಾಗದ-ಲೇಖನಿಯ ಮೊರೆ ಹೋದರು. "ನಿನ್ನ ರೂಪ, ನಿನ್ನ ವ್ಯಕ್ತಿತ್ವ, ಎಲ್ಲವೂ ನಿನ್ನನ್ನು ಮೋಹಿಸುವಂತೆ ಮಾಡಿದೆ. ನೀನು ನಕ್ಕರೆ ಕೆನ್ನೆಯಲ್ಲಿ ಬೇಳುವ ಗುಳಿ, ಆಗಾಗ ನಿನ್ನ ಕೆದರಿದ ಹೆರಳನ್ನು ನಿನ್ನ ಕಿರುಬೆರಳಿನಿಂದ ಕಿವಿಗೆ ಸಿಕ್ಕಿಸುವ ಪರಿ ಎಲ್ಲವೂ ನನಗೆ ಬಹಳ ಇಷ್ಟ. ಕೆಲವೊಮ್ಮೆ ಹಣೆಯ ಮೇಲೆ ನೀನಿಡುವ ಪುಟ್ಟ ಗುಂಡಗಿನ ಕುಂಕುಮ ನಿನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ....." ಎಂದೆಲ್ಲ ಹುಡುಗರು ಬರೆದರೆ, ಪತ್ರಕ್ಕೆ ಪ್ರತ್ಯುತ್ತರವಾಗಿ, "ನಿಮ್ಮ ಮೈಕಟ್ಟು, ನಿಮ್ಮ Shirt ಕಲರ್ Selection ಪರಿ, ತುಟಿಯಕೆಳಗೆ ನೀವೇ ಮೂಡಿಸಿಕೊಂಡಿರುವ ಚಿಕ್ಕದಾದ ಗಡ್ಡ ನನಗೆ ತುಂಬಾ ತುಂಬಾ ಇಷ್ಟ.... Glasses ನಿಂದ Contacts ಗೆ ಬದಲಿಸಿದ್ದು ಚೆನ್ನಾಗಿಲ್ಲ. ಪ್ಲೀಸ್ ಒಂದು ಪ್ಲೇನ್ ಗ್ಲಾಸ್ ಆದರೂ ಹಾಕಿಕೊಳ್ಳಿ..ಪ್ಲೀಸ್" ಎಂದಾಗಿ ಎಲ್ಲಾ ಕಾಗದದಲ್ಲಿ ವಾರ್ತಾಲಾಪ ನಡೆಯುತ್ತಿತ್ತು.
ಕಾಲ ಜರುಗಿತು. ಕಾಗದಕ್ಕೂ ಮಂಕು ಕವಿದಿತು. ಹಾಳೆಯ ಮೇಲೆ ಬರಬೇಕಿದ್ದ ಲೇಖನಿಯ ಗುರುತು, ಬರವಣಿಗೆ ವಿದ್ಯುನ್ಮಾನ ಅಂಚೆಗೆ ಬದಲಾವಣೆಯಾಯಿತು, ಮುದ್ದಾದ ಹಸ್ತಾಕ್ಷರ Digital Signature ಆಯ್ತು. ಲೇಖನಿ ಕೀಲಿಮಣೆಗೆ ಬದಲಿದರು ಅದೇ ಭಾವ ಹೊಮ್ಮಿಸುತ್ತಿತ್ತು. ಕೈಬರಹದಲ್ಲಿ ತರಬಹುದಾದ ಪ್ರೀತಿ, ಅಕ್ಕರೆ ವಿ-ಅಂಚೆಯಿಂದ ಸಾಧ್ಯವಾಗುತ್ತಿರಲಿಲ್ಲವಾದರೂ ಅಂತರಜಾಲದ ಮುಖೇನ ಸಾಕಷ್ಟು ವ್ಯವಹಾರ ನಡೆಸಿತು ನಮ್ಮ ವಿ-ಅಂಚೆ. ವಿ-ಅಂಚೆ ಪ್ರಾರಂಭವಾದ ಹೊಸತರಲ್ಲಿ, ಒಂದು ಅಂಚೆ ಕಳುಹಿಸಿ, ಸ್ವಲ್ಪ ಹೊತ್ತಿನ ನಂತರ ಕಳುಹಿಸಿದವನು ಎದುರಾದಾಗ, ಅವನಿಗೆ ಹೇಳುತ್ತಿದ್ದೆವು. ಅವನೂ ಅದಕ್ಕೆ ಪ್ರತ್ಯುತ್ತರ ನೀಡಿ ದೂರವಾಣಿ ಮೂಲಕ ತಾನೂ ಉತ್ತರಿಸಿದ್ದೇನೆಂದು ತಿಳಿಸುತ್ತಿದ್ದ. ಎಂಜಿನಿಯರಿಂಗ್ ತರಗತಿಗಳಲ್ಲಿಯೂ ಕಾಲಾಹರಣ ಮಾಡಲೋಸುಗ ಹಿಂದಿನ ಮೇಜಿಗೋ ಪಕ್ಕದ ಮೇಜಿಗೋ ಪ್ರಸಾದ್, ರಾಜಿ, ಸೌಮ್ಯ, ನಿತಿನ್, ಸೀನಾ,ರಶ್ಮಿ, ಶಿಲ್ಪಾ ಇವರೊಟ್ಟಿಗೆಲ್ಲ ಕಾಗದ ಒಬ್ಬರಿಂದ ಒಬ್ಬರಿಗೆ ಪಾಸ್ ಮಾಡುವ ಮೂಲಕ ಮಾತಾಡುತ್ತಿದ್ದೆವು. ನಮ್ಮ ಅದೃಷ್ಟಕ್ಕೆ ಎಂದೂ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಆ ಮುಖೇನ ನಡೆಯುತ್ತಿದ್ದ ಸಂಭಾಷಣೆ ಪ್ರಾಯಶಃ ಮುಖಾಮುಖಿ ಸಂಭಾಷಣೆಕಿಂತ ಎಷ್ಟೋ ಮುದ ನೀಡುತ್ತಿತ್ತು. ಈಗಲೂ ನನ್ನಲ್ಲಿ ಆ ಪುಟ್ಟ ಪುಟ್ಟ ಚೇಟಿಗಳು ಆ ಬರಹಗಳು ಎಲ್ಲವೂ ಇದೆ. ಮತ್ತೂ ಕಾಲ ಜರುಗಿತು. ಇದು, ಕೀಲಿಮಣೆ ಕೀಲಿಪಟ ಆದ ಸುವರ್ಣ ಯುಗ. ಹದಿಹರೆಯರೆಲ್ಲರಲ್ಲಿಯೂ ಒಂದು ಮೊಬೈಲ್. ಅಪ್ಪನ ದುಡ್ಡಿನ ಶಕ್ತ್ಯಾನುಸಾರ ತರಹ ತರಹದ ಮೊಬೈಲ್. ಆ ಮೊಬೈಲ್ ಒಳಗೆ ದಿನಕ್ಕೆ ಸುಮಾರು ೧೦೦ ಅಥವಾ ಕೇವಲ ೧೦೦ರೇ ಎಸ್.ಎಂ.ಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದ ಸಿಮ್ ಗಳು. ಇಂದಿಗೂ, ಎಂದಿಗೂ ಉಳಿದುಕೊಳ್ಳುವ ಎಸ್.ಎಂ.ಎಸ್ ಪದ್ಧತಿ ಪ್ರಾಯಶಃ ಇದರ ಗುಂಗಿನಲ್ಲೇ ಉಳಿದವರಿಗೆ ಅದರ ಮಹತ್ವ ಕೇಳಬಹುದು. ಬೆಳಿಗ್ಗೆ "ಶುಭ ಮುಂಜಾನೆ"ಯಿಂದ ಶುರುವಾಗುವ ಸಂದೇಶಗಳು, ರಾತ್ರಿಯ "ಶುಭ ರಾತ್ರಿ"ಯ ವರೆಗೂ ಸಾವಿರಾರು ಸಂದೇಷಗಳು..... ರಾತ್ರಿ ಹತ್ತು ಗಂಟೆಯಿಂದ ಹನ್ನಂದು ಗಂಟೆಯವರೆಗೂ ದೂರವಾಣಿಯ ಮೂಲಕ ಮಾತಾಡಿಯಾದರೂ, ಹನ್ನಂದು ಗಂಟೆ ಒಂದು ನಿಮಿಷಕ್ಕೆ ಕಳಿಸುವ "gud nite chweet dreamz take care.... missss u" ಸಂದೇಷ ಎಷ್ಟೊ ಬಾರಿ ಆನಂದ ತರುತ್ತದೆ. ನನ್ನನ್ನು ಯಾರೂ ಇವನಷ್ಟು ಚೆನ್ನಾಗೆ ಕಾಳಜಿ ಮಾಡುವವನೇ ಇಲ್ಲ ಎಂದೆಲ್ಲಾ ಅನಿಸುವಂತೆ ಮಾಡುತ್ತದೆ. ಇದು ಕೇವಲ ಪ್ರೇಮಿಗಳು ಕಳಿಸುವ ಸಂದೇಷವಲ್ಲ. ಒಬ್ಬರನ್ನು ಇಷ್ಟ ಪಡುವ, ಆದರಿಸುವ, ಪ್ರೀತಿಸುವ, ನಿಜವಾಗಿಯೂ ಅವನ/ಅವಳ ಅಗಲಿಕೆಯನ್ನು ಹಳಿಯುವ ಯುವ ಸ್ನೇಹಿತರ ಸಂದೇಷಗಳು. ಎಷ್ಟೋ ಬಾರಿ ಗಮನಿಸಿದ್ದೇನೆ. ಇನ್ಬಾಕ್ಸ್ ನಲ್ಲಿ forward sms ಕ್ಕಿಂತ ಹೆಚ್ಚಾಗಿ ಸ್ನೇಹಿತರು ಕಳಿಸುವ "take care misss u" ಸಂದೇಷಗಳೆ ಇರುತ್ತವೆ. ಕೀಲಿಪಟದ ಈ ಬರಹವೂ ಮನಸ್ಸಿಗೆ ಸಮಾಧಾನ, ಮುದ, ಆನಂದ, ಉಲ್ಲಸ, ಹರ್ಷ ತರುವುದರಲ್ಲಿ ಸಂಶಯವೇ ಇಲ್ಲ.
Sunday, January 20, 2008
ಗಾಳಿಪಟ-ವಿಶ್ಲೇಷಣೆ ಅತಿ ಶೀಘ್ರದಲ್ಲೇ.....
ಅಲ್ಲಿಯವರೆಗೂ ಆಕಾಶ ಇಷ್ಟೇ ಯಾಕಿದೆಯೆಂದು ಯೋಚಿಸುತ್ತಾ, ಜೀವ ಕಳೆವಾಮೃತಕೆ ಒಲಎಂದು ಹೆಸರಿಡುತ್ತಾ, ಕೇಳಿ ಒಂದು ನಧೀಂಧೀಂತನಾ ಕವಿತೆ, ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ.
Sunday, November 11, 2007
ಕನ್ನಡಿಗರೇ.....
Thursday, October 18, 2007
ಆಸೆ- ಆಶ್ವಾಸನೆ !?!
ಇದು " ಪ್ರವೀಣ್ " ನಲ್ಲಿ ಮೊದಲಿನಿಂದಲೂ ಕಂಡುಬಂದಿರುವ ಒಂದು ಗುಣ. ಇವನಿಗೆ ದ್ವಿತೀಯ ವಿಘ್ನದ ಲಕ್ಷಣ. ಯಾವುದೇ ಕೆಲಸವಾಗಲಿ, ಮೊದಲನೆಯ ದಿನದಂದು ಕಂಡುಬರುವ ಉತ್ಸಾಹ , ಸ್ವಲ್ಪ ದಿನಗಳಲ್ಲೇ ಹಾಗೆ ಉದುಗಿಹೋಗಿಬಿಡುತ್ತದೆ. ಅದು ಅವನು ಪ್ರಾರಂಭಮಾಡಿದ ದಿನಚರಿ ಬರೆಯುವ ಹವ್ಯಾಸವಿರಬಹುದು, ಅಥವಾ ಕನ್ನಡ ಪುಸ್ತಕ ಓದುವ ಆಸಕ್ತಿ ಇರಬಹುದು, ಕಲಿಯುತ್ತಿದ್ದ ವಿ.ಎಲ್.ಎಸ್.ಐ ಇರಬಹುದು, ಇಲ್ಲವೇ ಕಲಿಯುತ್ತಿದ್ದ ಕೊಳಲು ಇರಬಹುದು ಎಲ್ಲದರಲ್ಲೂ ಇನ್-ಕನ್ಸಿಸ್ಟೆನ್ಸಿ ಎದ್ದು ಕಾಣುತ್ತದೆ. ಇವೆಲ್ಲದಕ್ಕೂ ಕಾರಣ ಹುಡುಕಲೆತ್ನಿಸಿದರೆ, ಸಿಗುವ ಉತ್ತರ- "ಗುರು ಸ್ವಲ್ಪ ಬಿಜ಼ಿ ಇದ್ದೆ......ಆಗಲಿಲ್ಲ.....ಅರ್ಥ ಮಾಡಿಕೊಳೋ" ಇವನು ಒಂದಷ್ಟು ದಿನಗಳವರೆಗೆ ಇಂಗ್ಲಿಷ್ ದೈನಿಕ-ಡೆಕನ್ ಹೆರಾಳ್ಡ್ ನ ಸಾಪ್ತಾಹಿಕ ಪುರವಣಿ- ಓಪನ್ ಸೆಸೇಮ್ ನಲ್ಲಿ ಮಕ್ಕಳ ಅಂಕಣದಲ್ಲಿ ಖಾಯಮ್ ಏನಾದರೂ ಬರೆಯುತ್ತಿದ್ದ ಎಂಬುದಾಗಿ ಹೇಳಿದರೆ, ನಂಬಲು ಸಾಧ್ಯವೇ? ಅಸಾಧ್ಯವಾದರೂ ನಂಬಲೇ ಬೇಕು. ಪುರಾವೆ ಕೇಳಿದರೆ........"ಊಹುಂ ನನ್ನಲ್ಲಿ ಇಲ್ಲ" ಎನ್ನುತ್ತಾನೆ. ಅವನಿಗಿನ್ನೂ ನೆನಪಿರಬಹುದು ಅವನಪ್ಪ ಮಾರ್ಕ್ಸ್ ಕಾರ್ಡ್ ನೋಡಿ ಅವನ ಅಮ್ಮನಿಗೆ ಹೇಳುತ್ತಿದ್ದರು-".....ಇಲ್ವೇ ಇವ್ನು ಸೋಶಿಯಲ್ ನಲ್ಲಿ ವೀಕ್ ಇದಾನೆ ಅಥವಾ ಗಣಿತದಲ್ಲಿ ವೀಕ್ ಇದಾನೆ ಅಂತ ಕ್ಯಾಟೆಗೊರೈಸ್ ಮಾಡಕ್ಕೆ ಕಷ್ಟ ಕಣೇ........ ಫ಼ರ್ಸ್ಟ್ ಟೆಸ್ಟ್ ನಲ್ಲಿ ಸೊಶಿಯಲ್ ಗೆ ಕಡಿಮೆ ಮಾರ್ಕ್ಸ, ಮುಂದಿನ ಟೆಸ್ಟ್ ನಲ್ಲಿ ಗಣಿತದಲ್ಲಿ ಕಡಿಮೆ..... ತದನಂತರ ಕನ್ನಡದಲ್ಲಿ......ಮತ್ತೆಯಾವಾಗಲೋ ಹಿಂದಿಯಲ್ಲಿ......" ಇವನ ಕತೆ ಇಂಜಿನೀಯರಿಂಗ್ ನಲ್ಲೂ ಅಷ್ಟೆ. ಮೊದಲನೆಯ ಇಂಟರ್ನಲ್ ನಲ್ಲಿ ಇದ್ದ ಮಾರ್ಕ್ಸ್ ಉಳಿದ ಇಂಟರ್ನಲ್ ಗಳ ಮಾರ್ಕ್ಸ್ ಜೊತೆ ಕಂಪೇರ್ ಮಾಡುವಂತಿರಲಿಲ್ಲ.
ಈ ಇನ್-ಕನ್ಸಿಸ್ಟೆನ್ಸಿಯಿಂದ ಹೊರಬರಲು ಸದಾ ಪ್ರಯತ್ನಿಸುತ್ತಿದ್ದ ಈತ ತನ್ನ ಪ್ರಿಯವಾದ ಹವ್ಯಾಸ- ಬರವಣಿಗೆ ಬಗ್ಗೆ ಹೆಚ್ಚು ಆಸಕ್ತಿವಹಿಸಿ, ಬ್ಲಾಗ್ ಬರೆಯಲಾರಂಭಿಸಿದ. ಎರಡು ಅಂಕಣಗಳನ್ನು ಬರೆದು ಪ್ರಾಯಷಃ ಇನ್ನೇನೂ ಬರೆಯುವುದೇ ಇಲ್ಲವೆನೋ ಎಂದು ಭಾವಿಸಿದ್ದವರಿಗೆ ಮತ್ತೂ ಹಲವು ಅಂಕಣಗಳ ಭರವಸೆ ನೀಡುತ್ತಿದ್ದಾನೆ.
ಅಮೆರಿಕೆಯ ಕನ್ನಡಿಗನೊಬ್ಬನ ಬಗ್ಗೆ, ಪೂಜ್ಯ ಶ್ರೀ ಎಸ್.ಎಲ್.ಭೈರಪ್ಪ ನವರ "ಆವರಣ" ಕಾದಂಬರಿಯ ವಿಶ್ಲೇಷಣೆ, ..................ಮುಂಬರುವ ದಿನಗಳಲ್ಲಿ ನೋಡಬಹುದೇನೋ ಎಂದು ನಂಬುವ..
ನಿಮ್ಮವ,
ಪ್ರಕೊಪ
ಪ್ರವೀಣ್ ಪಟವರ್ಧನ್
Monday, June 18, 2007
ಜೊಗದ ತಂಗಿ ನಯಾಗರ
ಜೂನ್ ೨ ರಂದು ನಾವು (ರಾಘು, ಅನು, ಸುಮನ್, ಅಮಿತ್, ಮೀರಾ, ಜೆಜಿ, ರೋಣದ್, ಸಂತು, ಹಾಗು ನಾನು), ಡಾಲಸ್ ಫ಼ೋರ್ಟ್ ವರ್ತ್ ವಿಮಾನ ನಿಲ್ದಾಣದಿಂದ ಬಫ಼ಲೊ-ನಯಾಗರಕ್ಕೆ ಹೊರಟೆವು. ಸುಮಾರು ಐದು ತಾಸಿನ ಪ್ರಯಾಣ ಮುಗಿಸಿ ನಯಾಗರ ಬಳಿಯೇ ಇದ್ದ ಹೋಟೆಲ್ ಒಂದರಲ್ಲಿ ಸ್ವಲ್ಪ ದಣಿವಾರಿಸಿಕೊಂಡು ಸರ್ದಾರ್ ಇಂಡಿಯನ್ ಹೋಟೆಲಿನಲ್ಲಿ ಒಂದು ಘಂಟೆಯ ಕಾಲ ಹರಟುತ್ತಾ ಭರ್ಜರಿಯಾಗಿ ಊಟ ಮುಗಿಸಿ ಕಾರಿನಲ್ಲಿ ನಯಾಗರ ಜಲಪಾತದೆಡೆಗೆ ತೆರಳಿದೆವು. ಜೋಗ, ಹೊಗೇನ್ಕಲ್, ಅಬ್ಬಿ, ಇರುಪು, ಹನುಮಾನಗುಂಡಿ(ಸೂತನಬ್ಬಿ), ಗಗನಚುಕ್ಕಿ, ಚುಂಚಿ ಹೀಗೆ ಹಲವಾರು ಜಲಪಾತಗಳಿಗೆ ನಾನು ಈ ಹಿಂದೆ ಹೋಗಿದ್ದೇನೆ. ಬಹಳ ಆನಂದಪಟ್ಟಿದ್ದೇನೆ. ಆ ಅಷ್ಟೂ ಜಲಪಾತಕ್ಕೆ ಹೋದ ಅನುಭವಗಳನ್ನು ಮೆಲಕುಹಾಕಿಕೊಂಡರೆ ನೆನಪಾಗುವುದು, ಕಾಡಿನಲ್ಲಿ ತಾಸುಗಟ್ಟಲೆ ಕಲ್ಲು-ಮುಳ್ಳುಗಳ ಹಾದಿಯಲ್ಲಿ ಕಷ್ಟವಾದರೂ ಇಷ್ಟಪಟ್ಟು ನಡೆದು, ಮಧ್ಯೆ-ಮಧ್ಯೆ ಜಿಗಣೆಗಳಿಂದಗಿ ರಕ್ತ ದಾನಮಾಡಿ..ಅಂತೂ ಜಲಪಾತದ ಬುಡಕ್ಕೆ ಹೋಗಿ ನಿಂತರೆ ಆಹಾ... ಎಲ್ಲವನ್ನೂ ಮರೆವ ಸ್ವರ್ಗ-ಸುಖ. ಹೀಗಿರುವ ಅನುಭವಗಳ ನಡುವೆ ನಯಾಗರ ಜಲಪಾತವೂ ಅಂತಹದ್ದೇ ಒಂದು ಪ್ರಕೃತಿಯ ಮಡಿಲಲ್ಲಿ ಇರಬಹುದೆಂದು ಊಹಿಸಿದ್ದು ಕಾರ್ ಇಳಿಯುತ್ತಿರುವಂತೆ ಸುಳ್ಳೆನಿಸತೊಡಗಿತು. ಕಣ್ಣು ಸರಿಯಾಗಿ ತೆರೆದು ನೋಡಿದರೂ ಕಾಣುತ್ತಿದ್ದುದು ಪಕ್ಕಾ ಬೆಂಗಳೂರಿನ ಟ್ರಾಫ಼ಿಕ್. ತೀರಾ ಬೆಂಗಳೂರಿನಷ್ಟು ವಾಹನ ಚಾಲನೆ ಇರದಿದ್ದರೂ ಕಾರ್ ನಿಂತ ಕಡೆಯಿಂದ ರಸ್ತೆಯ ಮತ್ತೊಂದು ಬದಿಗೆ ದಾಟಲು ಮೂರ್ನಾಲಕ್ಕು ನಿಮಿಷ ಕಾಯಬೇಕಾಯಿತು. ಹಾಗೆಯೇ ಮುಂದೆ ಹೋದಂತೆ, ಅಜಮಾಸು ಹತ್ತು ಅಂತಸ್ತಿನ ಫ಼ುಡ್ ಕೋರ್ಟ್, ಶಾಪಿಂಗ್ ಮಾಲ್, ಹೊಟೆಲ್, ಹೀಗೆ ದೊಡ್ಡ ದೊಡ್ಡ ಕಟ್ಟಡಗಳಲ್ಲದೆ ಬೇರೇನೂ ಕಾಣಸಿಗುತ್ತಿರಲಿಲ್ಲ. ಅಂತೂ ಅಲ್ಲೆಲ್ಲೋ ೨೯ ಡಾಲರ್ ಕೊಟ್ಟು ನಯಾಗರ ವೀಕ್ಷಿಸಲು ಟಿಕೆಟ್ ಕೊಂಡುಕೊಂಡೆವು. ಹಾಗೆ ಆ ದೊಡ್ಡ ಐಶಾರಾಮಿ ಕಟ್ಟಡದಿಂದ ಹೊರಬಂದು ನೋಡಲು, ’ಭರ್’ ಎಂದು ನೀರು ಹರಿಯುವುದನ್ನು ಕಂಡೆವು. ನನ್ನ ಮನಸ್ಸು, "ಇದೂ ಕೃತಕವೇ ಕಣೋ" ಎಂಬುದಾಗಿ ಕುಟುಕುತಿತ್ತು. ಹತ್ತಿರ ಓಡಿಹೋಗಿ ನೋಡಲು ಅಲ್ಲಿ ಹರಿಯುತ್ತಿದ್ದವಳೇ ನಯಾಗರ!
ನದಿ ಸಿಕ್ಕಿತೆಂದರೆ ಜಲಪಾತವೂ ಸಿಕ್ಕಂತೆ ಎಂದು ತಿಳಿಯುವಷ್ಟರಲ್ಲಿ ಕಂಡದ್ದು ಶೆರಾಟನ್ ಹೋಟೆಲ್, ಕಾಸಿನೋಗಳು, ವಿಶ್ವದ ಅತಿ ಎತ್ತರದ ಇಮಾರತ್ತುಗಳಲ್ಲಿ ಒಂದಾದ ಪ್ರಖ್ಯಾತ ತಿರುಗುವ ಹೋಟೆಲ್ ಸ್ಕೈಲಾನ್ ಟವರ್‍ಸ್..... ಹೀಗೆ ಹಲವಾರು ಕಟ್ಟಡಗಳು; ಹಾಗೊಮ್ಮೆ ಹೀಗೊಮ್ಮೆ ಹಾರುವ ಹೆಲಿಕಾಫ್ಟರ್ಗಳೂ. ಅಲ್ಲೇ ನಮ್ಮ ಕಣ್ಣಳತೆಯ ದೂರದಲ್ಲೇ ಧುಮ್ಮಿಕ್ಕಿ ಹರಿಯುತ್ತಿದ್ದಳು- ನಯಾಗರ.
ಕೆನಡಾ, ಅಮೇರಿಕ ದೇಶಗಳನ್ನು ಬೇರ್ಪಡಿಸುವ ಕಾಲುವೆಯಾಗಿ ಹರಿಯುತ್ತಾಳೆ ನಯಾಗರ. ಅಷ್ಟೆ ಅಲ್ಲದೆ, ಹರಿದು ಮತ್ತೆಲ್ಲೋ ವಿದ್ಯುತ್ ಶಕ್ತಿ ಉತ್ಪಾದಿಸುವ ಘಟಕಕ್ಕೆ ಹೊಗುವ ಮುನ್ನ ಮೂರು ಸುಂದರ ಜಲಪಾತಗಳನ್ನು ಹುಟ್ಟು ಹಾಕಿ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದ್ದಾಳೆ ಆಕರ್ಷಿಸುತ್ತಲೇ ಇರುತ್ತಾಳೆ. ಇಲ್ಲಿನ ಮೂಲ ನಿವಾಸಿಗಳಾದ ಓಂಗಿಯಾರ ಬುಡಕಟ್ಟು ಜನಾಂಗದವರೆ ಈ ನದಿಗೆ ಒಂಗಿಯುಹಾರ ಅರ್ಥಾತ್ "ಕಡಲ್ಗಾಲುವೆ" ಎಂದು ನಾಮಕರಣ ಮಾಡಿದ್ದರು. ನಯಾಗರ ಜಲಪಾತ ಮೂರು ಜಲಪಾತಗಳ ಸಮೂಹ. ಮೊದಲನೆಯದು ಅಮೇರಿಕನ್ ಫ಼ಾಲ್ಸ್ ಎರಡನೆಯದು ಬ್ರೈಡಲ್ ವೀಲ್ ಫ಼ಾಲ್ಸ್ ಹಾಗು ಕೊನೆಯದು ಕನಡಿಯನ್ ಅಥವಾ ಹಾರ್ಷ್ ಶೂ ಫ಼ಾಲ್ಸ್. ಮೊದಲೆರೆಡು ಅಮೇರಿಕನರ ಹಕ್ಕಾದರೆ ಮೂರನೆಯದು ಕೆನಡಾ ದೇಶದ ಸುಪರ್ದಿಗೆ ಸೇರಿದ್ದು.ಸ್ಥಳೀಯ ಜನರ ನಂಬಿಕೆಯೆಂದರೆ ಈ ಜಲಪಾತದ ಕಲ್ಲುಗಳ ಹಿಂದೆ ಹೇನೊ ಹಾಗು ಲೀಲಾವಾಲ್ ಎಂಬ ದೇವ-ದೇವತೆಗಳು ಇಂದಿಗೂ ವಾಸಿಸುತ್ತಿವೆ ಎಂದು.
ನಯಾಗರಾದ ಹಿನ್ನೋಟ-ಕುಡಿನೋಟಗಳನ್ನು ನೋಡಿಯೇ ದಂಗಾದ ನಾವು ನಾವೆಯಲ್ಲಿ ಕುಳಿತು ಸಿಂಹಾವಲೋಕನಕ್ಕೆ ಮುಂದಾದೆವು. ಆ ನಯನಮನೋಹರ ದೃಶ್ಯಾವಳಿ ಕಂಡು ನಾವು ಅಮೇರಿಕೆಯಲ್ಲಿದ್ದೇವೆಂದೂ ಮರೆತು ಚೀರಿ, ಕಿರುಚಿ ನಮ್ಮ ಹರ್ಷೋದ್ಗಾರ ವ್ಯಕ್ತಪಡಿಸಿದೆವು. ಹಾಗೆಲ್ಲ ಆತ್ಮಸಂತೋಷ ವ್ಯಕ್ತಪಡಿಸುವುದು ತಪ್ಪೇ?-ಇಲ್ಲವೆಂದಿತ್ತು ಆ ದಿನದ ವಿಸ್ಮಯ.
ಅಮೇರಿಕನ್ ಫ಼ಾಲ್ಸ್ ೧೭೬ ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಪ್ರತಿ ಸೆಕಂಡ್ ಗೆ ೧೫೦೦೦೦ ಗಾಲನ್ ನೀರು ಹರಿಯುತ್ತದೆ. ಬ್ರಿಂಕ್(ಜಲಪಾತದ ಒಂದು ತುದಿಯಿಂದ ಇನ್ನೊಂದು ತುದಿ) ಸುಮಾರು ೧೦೦೦ ಅಡಿ ಬ್ರೈಡಲ್ ವೀಲ್ ಜಲಪಾತವೂ ಸರಿಸುಮಾರು ಅಷ್ಟೇ ಎತ್ತರದಿಂದ ಧುಮುಕಿದರೂ ನೀರಿನ ಹರಿವಿನ ಪ್ರಮಾಣ ಕಡಿಮೆ. ಕೆನಡಾ ಫ಼ಾಲ್ಸ್ ನ ಹರಿವು ಪ್ರತಿ ಸೆಕಂಡ್ ಗೆ ೬೦೦,೦೦೦ ಗಾಲನ್. ಹಾಗು ಬ್ರಿಂಕ್ ನ ಅಳತೆ ೨೬೦೦ ಅಡಿ. ಕೆನೆಡಿಯನ್ ಫ಼ಾಲ್ಸ್ ನ ವಾಯುವಿಹಾರದ ದ್ರುಶ್ಯ " "ಕಂಡಂತೆ ಕಾಣುವುದರಿಂದಲೇ ಈ ಹೆಸರು. ಈ ನಯಾಗರ ಜಲಪಾತವನ್ನು ಇತರೆ ಎಲ್ಲಾ ಜಲಪಾತಗಳಿಗಿಂಥ ವಿಷಿಷ್ಠವಾಗಿಸುವುದೇ ಈ ಅಂಕಿ ಅಂಶಗಳು.
ಮಧ್ಯಾಹ್ನವಿಡೀ ಸುಂದರ ದೃಶ್ಯಗಳನ್ನು ಲೊಚನಗಳಲ್ಲಿ, ಸುಲೋಚನಗಳಲ್ಲಿ, ಕಮೆರಾ ಕಣ್ಣುಗಳಲ್ಲಿ ಸೆರೆಹಿಡಿದು ಸಂಜೆಗೆ ಅಲ್ಲಿಯೇ ಅಡ್ಡಾಡುತ್ತಾ ಕಾಲಕಳೆದೆವು. ರಾತ್ರಿ ಎಂಟು ಘಂಟೆಗೆ ಸುಮಾರು ಕೆನಡಾ ದೇಶದ ಕಡೆಯಿಂದ ಜಲಪಾತಕ್ಕೆ ಬೆಳಕು ಚೆಲ್ಲುವ ಸುಂದರ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಸಂಪೂರ್ಣವಾಗಿ ಈ ಜಲಪಾತಗಳು ಕಾಣದಿದ್ದರೂ ಕತ್ತಲೆಯಲ್ಲಿ ಬೆಳಕು ಚೆಲ್ಲಿದ ಆ ನೋಟ ನೋಡಲು ಈ ಎರಡು ಕಣ್ಣುಗಳು ಸಾಲದು. ಕಡೆಗಂತೂ ಊಟ ಮುಗಿಸಿ ಮನೆಗೆ ಬಂದಾಗ ೧೧ ಘಂಟೆ.
ಮಾರನೆಯ ದಿನವೂ ನಯಾಗರದ ಶೇಷ ಭಾಗಗಳನ್ನು ನೋಡಲು ಹೊರಟೆವು.
ಆ ದಿನ ಕೇವ್ ಆಫ಼್ ದ ವಿಂಡ್ಸ್ ಎಂಬ ಮತ್ತೊಂದು ರೋಮಾಂಚನಾಕಾರಿ ಪ್ರಯಾಗಕ್ಕೆ ಸಿಧ್ಧತೆ ನಡೆಸಿದೆವು. ಸುಮಾರು ೧೭೦ ಅಡಿಯಷ್ಟು ಕಲ್ಲು ಕೋರೆದು ಅಲ್ಲೊಂದು ಎಲೆವಟರ್ ಕೂರಿಸಲಾಗಿದೆ. ಆ ಎಲೆವಟರ್ ಸಹಾಯದಿಂದಲೇ ನಮ್ಮನ್ನು ಕೊರೆಯುವ ನೀರಿನೆಡೆಗೆ ಕರೆದೊಯ್ದರು ನಯಾಗರ ಸಿಬ್ಬಂದಿಯವರು. ಸೀದ ಬ್ರೈಡಲ್ ಫ಼ಾಲ್ಸ್ ನ ಗುಂಡಿಗೆ ಹೋಗಿ ಅಲ್ಲಿ ಮೈ ತೋಯಿಸಿಕೊಂಡು ಕುಣಿದು ಕುಪ್ಪಳಿಸಿ ಆನಂದಿಸಿ ಆ ಜಾಗದಿಂದ ಕೊಂಚವೂ ಕದಲುವ ಮನಸ್ಸಿಲ್ಲದೇ ಅಂತೂ ಜಠರೋಪಾಸನೆಯ ಸಲುವಾಗಿ ಅಲ್ಲಿಂದ ಹೊರಟೆವು. ಅಲ್ಲಿಗೆ ಮುಗಿಯಿತೆ ನಯಾಗರ ಕಥನ?
ಇನ್ನೂ ಇಲ್ಲಾ! ಊಟ ಮುಗಿಸಿ ನಮ್ಮ ಕಾಪ್ಟಾನ್ ರಾಘು ಹಾಗು ವೈಸ್ ಕಾಪ್ಟಾನ್ ಜೆಜಿ ಸಹಾಯದಿಂದ ಬಫ಼ಲೊ ವಿಮಾನ ನಿಲ್ದಾಣಕ್ಕೆ ಬಂದು ತಲುಪಲು ಅಲ್ಲಿ ಕಾದಿತ್ತೆ ನಮ್ಮ ವಿಮಾನ? ಊಹೂಂ!!!!! ಆ ದಿನದ ಕೊನೆಯ ವಿಮಾನವನ್ನು ನಾವು ಮಿಸ್ ಮಾಡಿಕೊಂಡಿದ್ದೆವು. We were too early for the next day's flight!! ಹೇಗೋ ನಮ್ಮ ಕಾಪ್ಟಾನ್ ಬಸು (ಇಟಗಿ)ಯವರ ಸಹಾಯದಿಂದ ಮಾರನೆಯ ದಿನದ ವಿಮಾನಕ್ಕೆ ನಮ್ಮ ಪ್ರಯಾಣದ ಟಿಕೆಟ್ ಕಾಯ್ದಿರಿಸಿ ಮತ್ತೊಂದು ದಿನ ಅಲ್ಲೆ ಉಳಿದು ಡಾಲಸ್ ಗೆ ವಾಪಾಸ್ ಆದೆವು.